ನೂರಾರು ಕೋಟಿಗಳ ಆಸ್ತಿಯು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಹೆಸರಿನಲ್ಲಿದ್ದು, ಟ್ರಸ್ಟಿನ ಸದಸ್ಯರಿಂದ ಆಸ್ತಿ ಮತ್ತು ಆದಾಯ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಮತ್ತು ಆಶ್ರಮದ ಭಕ್ತರು ಆರೋಪಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವಂತೆ ಒತ್ತಾಯಿಸಿ, ಸರ್ಕಾರ ಸಮರ್ಥ ಆಡಳಿತಾಧಿಕಾರಿ ನೇಮಿಸಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ನೂರಾರು ಕೋಟಿ ಆಸ್ತಿ ಹೊಂದಿರುವ ಆಶ್ರಮದ ಆಸ್ತಿ ಮತ್ತು ಆದಾಯವನ್ನು ಅವ್ಯವಹಾರದ ಆರೋಪ ಹೊತ್ತಿರುವ ಟ್ರಸ್ಟಿನ ಕೆಲವು ಸದಸ್ಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅವ್ಯವಹಾರ ನಡೆಸುತ್ತಿದ್ದಾರೆ. ಇದರಿಂದ ಆಶ್ರಮದ ಹೆಸರು ಕೆಡುತ್ತಿದ್ದು, ಆಶ್ರಮದ ಆಸ್ತಿಗಳನ್ನು ಪರಭಾರೆ ಮಾಡಲು ಯತ್ನಿಸಿದ್ದಾರೆ ಮತ್ತು ನೀತಿ ನಿಯಮಗಳಿಗೆ ವಿರುದ್ಧವಾಗಿ ಟ್ರಸ್ಟ್ ಗೆ ಸದಸ್ಯರನ್ನು ನೇಮಿಸಲಾಗಿದೆ” ಎಂದು ಹೋರಾಟ ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.
ಹೋರಾಟ ನಡೆಸುತ್ತಿರುವ ಆಶ್ರಮ ಉಳಿಸಿ ಹೋರಾಟ ಸಮಿತಿಯ ಮುಖಂಡ ಸಂತೋಷ್ ಮಾತನಾಡಿ, “ಪೂಜ್ಯ ತಿರುಕ ಶ್ರೀ ರಾಘವೇಂದ್ರ ಸ್ವಾಮೀಜಿ ಅವರು ಭಿಕ್ಷೆ ಬೇಡಿ ಕಟ್ಟಿ ಬೆಳೆಸಿದ ಅನಾಥಸೇವಾಶ್ರಮದ ವ್ಯವಹಾರಗಳು ಹದಗೆಟ್ಟಿವೆ. ಟ್ರಸ್ಟಿನ ನಿಯಮಗಳಿಗೆ ವಿರುದ್ಧವಾಗಿ ಬೇಕಾಬಿಟ್ಟಿಯಾಗಿ ಅನರ್ಹರನ್ನು ಟ್ರಸ್ಟಿಗಳನ್ನಾಗಿ ನೇಮಿಸಿಕೊಂಡು ಆಶ್ರಮದ ಆಸ್ತಿಗಳ ಪರಭಾರೆಗೆ ಪ್ರಯತ್ನ ಇತ್ಯಾದಿ ಅವ್ಯವಹಾರಗಳನ್ನು ನಡೆಸಲಾಗುತ್ತಿದೆ. ಆಶ್ರಮದ ಕೀರ್ತಿಗೂ ಧಕ್ಕೆ ಬರುತ್ತಿರುವುದಲ್ಲದೆ, ಸಾರ್ವಜನಿಕ ಆಸ್ತಿಗಳೂ ಖಾಸಗಿಯವರ ಪಾಲಾಗುವ ಸಂಭವಿವಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಾವಗಡ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ರೈತ ಸಂಘ ಇತರೆ ಸಂಘಟನೆಗಳ ಅನಿರ್ದಿಷ್ಟ ಮುಷ್ಕರ
“ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ಆಶ್ರಮದ ಅಪಾರ ಸಂಪತ್ತನ್ನು ರಕ್ಷಿಸುವ ದೃಷ್ಟಿಯಿಂದ ಕೂಡಲೇ ಓರ್ವ ಸಮರ್ಥರನ್ನು ಆಶ್ರಮಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ವಿನಂತಿಸುತ್ತೇವೆ. ಈ ಹಿಂದೆ ಆಶ್ರಮಕ್ಕೆ ತೊಂದರೆಯುಂಟಾದಾಗ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮಧ್ಯ ಪ್ರವೇಶಿಸಿ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಬೆಂಬಲಕ್ಕೆ ನಿಂತಿದ್ದರು. ಸರ್ಕಾರ ಈ ಕೂಡಲೇ ಆಶ್ರಮಕ್ಕೆ ಸಮರ್ಥ ಆಡಳಿತಾಧಿಕಾರಿ ನೇಮಿಸಿ, ಆಶ್ರಮದ ಅವ್ಯವಹಾರ ತಡೆಯಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಾಜಿ ಶಾಸಕ ಉಮಾಪತಿ, ಓಂಕಾರ ಮೂರ್ತಿ ವಕೀಲರು, ಅಜ್ಜಯ್ಯ, ಉಮೇಶ್, ಶರತ್ ಕುಮಾರ್, ಚೇತನ್, ದುಮ್ಮಿ ಚಿಕ್ಕಪ್ಪ, ಸಿದ್ದಪ್ಪ , ಪತ್ರಕರ್ತ ಚಿತ್ತಪ್ಪ , ಮನ್ಸೂರ್ ಪಾಷಾ, ಶಿವಪುರ ಹಾಲೇಶ್, ಚನ್ನಪ್ಪನಹಟ್ಟಿ ಜಯ್ಯಪ್ಪ ಗೌಡ, ವಿನೋದ್, ಆಂಜಿನಪುರ ಜಗನ್ನಾಥ, ಕೆಂಗುಂಟೆ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ರಾಮಘಟ್ಟ ನಾಗರಾಜ್, ಕೆಂಗುಂಟೆ ಘಟ್ಟಿ ಓಂಕಾರಪ್ಪ, ಮಲ್ಲಾಡಿಹಳ್ಳಿ ವೆಂಕಟೇಶ್, ಗೋಪಾಲಪ್ಪ ಶಿಕ್ಷಕರು, ಮುಸ್ಲಿಂ ಮುಖಂಡ ಇಮ್ರಾನ್ ಸಾಬ್, ಗ್ರಾಮ ಪಂಚಾಯಿತಿ ಸದಸ್ಯ ಬಾಬೂಜಿ ಸೇರಿದಂತೆ ನೂರಾರು ಮುಖಂಡರು, ಆಶ್ರಮದ ಭಕ್ತರು ಭಾಗವಹಿಸಿದ್ದಾರೆ.