ಬೇಸಿಗೆಯಲ್ಲಿ ವಿದ್ಯುತ್ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಚಿತ್ರದುರ್ಗ ಜಿಲ್ಲಾಡಳಿತದಿಂದ ಕರೆದಿದ್ದ ರೈತಸಭೆಯನ್ನು ರೈತರು ಬಹಿಷ್ಕರಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಹೊರಟು, ಮೂಂದೂಡಿದ ಘಟನೆ ನಡೆದಿದೆ.
ರೈತರೊಂದಿಗೆ ವಿದ್ಯುತ್, ಬೆಳೆ ಪರಿಹಾರ ಸೇರಿದಂತೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾಡಳಿತದಿಂದ ಆಯೋಜಿಸಿದ್ದ ರೈತರಿಂದ ಸಭೆ ಸ್ಥಳದ ಸ್ಥಳದ ಗೊಂದಲದಿಂದ ಪ್ರಾರಂಭವಾಗದೆ ಅಧಿಕಾರಿಗಳ ವಿರುದ್ಧ ರೈತರು ಬಹಿಷ್ಕಾರ ಹಾಕಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ
ರೈತರು ಸಾಮಾನ್ಯವಾಗಿ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಎದುರಿಸುವ ವಿದ್ಯುತ್ ಸಮಸ್ಯೆ, ಬೆಳೆ ವಿಮೆ ಪರಿಹಾರ, ಭದ್ರಾ ಮೇಲ್ದಂಡೆ ಕಾಮಗಾರಿ ಕುರಿತಂತೆ ಚರ್ಚಿಸಲು ರೈತರ ಸಭೆಯನ್ನು ಮೊದಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾ.25 ಮಂಗಳವಾರ ಬೆಳಗ್ಗೆ 11 ಗಂಟೆಗೆ ಕರೆಯಲಾಗಿತ್ತು. ಆದರೆ, ಈ ಸಭೆ ಕಾರಣಾಂತರಗಳಿಂದ ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಸ್ತಳಾಂತರವಾಗಿತ್ತು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ, ಮಿನಿ ಸಭಾಂಗಣದಲ್ಲಿ ರೈತರ ಸಭೆಗೆ ವ್ಯವಸ್ಥೆ ಮಾಡಲಾಗಿತ್ತು.
ಮಿನಿ ಸಭಾಂಗಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದ ರೈತರಿಗೆ ಕುಳಿತುಕೊಳ್ಳಲು ಜಾಗ ಇಲ್ಲದಂತಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ರೈತರು ಸಭೆಗೆ ಆಗಮಿಸಿದ್ದರಿಂದ ಅಧಿಕಾರಿಗಳು ಕುರ್ಚಿ ವ್ಯವಸ್ಥೆ ಮಾಡಿದರೂ, ಜಾಗ ಸಾಲದಾಯಿತು. ಇದರಿಂದ ಸಿಡಿಮಿಡಿಗೊಂಡ ಹಲವು, ರೈತರು ಕುಳಿತುಕೊಳ್ಳಲು ಜಾಗವೇ ಇಲ್ಲದೇ, ಇಂತಹ ಕಾಟಾಚಾರದ ಸಭೆ ಯಾಕೆ ಮಾಡುತ್ತೀರಿ ಎಂದು ಅಸಮಧಾನ ವ್ಯಕ್ತಪಡಿಸಿ, ವಾಪಾಸು ಮುಖ್ಯ ಸಭಾಂಗಣಕ್ಕೆ ಬಂದ ರೈತರು, ಅಲ್ಲಿಯೂ ಆರೋಗ್ಯ ಇಲಾಖೆ ಕಾರ್ಯಕ್ರಮ ಬೇಗ ಮುಗಿಯದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ಬೆಳಗ್ಗೆ 11 ಗಂಟೆಗೆ ಕರೆದಿದ್ದ ಸಭೆಗೆ 12.45 ಆದರೂ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ಆಗಮಿಸದಿರುವುದನ್ನು ಕಂಡು ರೈತರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಈ ವೇಳೆ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, “ಸರಿಯಾದ ಜಾಗವೇ ನಿಗದಿಯಾಗದೇ ರೈತರ ಸಭೆ ಕರೆದು ಸಭೆ ಗೊಂದಲದ ಗೂಡಾಗಿದೆ. ಒಂದೂವರೆ ಗಂಟೆಯಾದರೂ ಅಧಿಕಾರಿಗಳು ಬಂದಿಲ್ಲ. ಆದ್ದರಿಂದ ಈ ಸಭೆಯನ್ನು ಬರ್ಖಾಸ್ತು ಮಾಡಿ ಯುಗಾದಿ ಹಬ್ಬದ ನಂತರ ಕರೆಯಲಿ ಎಂದು ಒತ್ತಾಯಿಸಿದಾಗ ರೈತರು ಸಹಮತ ವ್ಯಕ್ತಪಡಿಸಿದರು.
ಈ ವೇಳೆಗೆ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಾಗೂ ಡಿವೈಎಸ್‌ಪಿ ದಿನಕರ್ ಕೆಲ ರೈತರ ಜೊತೆಗೆ ಮಾತುಕತೆ ನಡೆಸಿ, ಯುಗಾದಿ ಹಬ್ಬದ ನಂತರ ರೈತರ ಸಭೆ ನಡೆಸಿ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ರೈತ ಮುಖಂಡರಾದ ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಎನ್.ಇ.ಲಕ್ಷ್ಮಿಕಾಂತ್ , ಹುಣಸೆಕಟ್ಟೆ ಕಾಂತರಾಜ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಸಿದ್ದಪ್ಪ, ತಿಮ್ಮಣ್ಣ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಲವು ರೈತರು ಆಗಮಿಸಿದ್ದರು.