ಚಿತ್ರದುರ್ಗದ ಆದಿ ಕರ್ನಾಟಕ ವಸತಿನಿಲಯದ ಆವರಣದಲ್ಲಿ ಸಾಮಾಜಿಕ ಸಂಘರ್ಷ ಸಮಿತಿ-ಚಿತ್ರದುರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡದ ನೌಕರರ ಒಕ್ಕೂಟ-ತುಮಕೂರು ಇವರು ಹಮ್ಮಿಕೊಂಡಿದ್ದ “ಧೃವೀಕೃತ ದಲಿತ ಚಳುವಳಿಯ ಕಟ್ಟುವಿಕೆ ದಿನ”ವಾಗಿ ಪ್ರೊ. ಬಿ ಕೃಷ್ಣಪ್ಪ ನವರ ಜನ್ಮದಿನವನ್ನು ಆಯೋಜಿಸಿಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಲಿತಕಲಾ ಅಕಾಡಮಿ ಮಾಜಿ ಅಧ್ಯಕ್ಷ ಚಂದ್ರಶೇಖರ್,
“ಸಮುದಾಯದ ಗುಂಪುಗಳು, ಸಂಘಟನೆಗಳು ಇಂದು ಹೆಚ್ಚಾಗಿವೆ. ಆಲೋಚನೆ ಕ್ರಮ ಹೆಚ್ಚಾಗಿದೆ.
ಆದರೆ ಸಮಾಜದ ಮೇಲೆ ಆಕ್ರಮಣಗಳು ಹೆಚ್ಚುತ್ತಿವೆ. ಇದರ ವಿರುದ್ಧ ಹೋರಾಟಕ್ಕೆ ಗಟ್ಟಿ ಸಂಘಟನೆಗಳ ಅಗತ್ಯವಿದೆ. ಪ್ರೊ.ಕೃಷ್ಣಪ್ಪನವರ ಭಾಷಣಗಳನ್ನು ನಾನು ಬೀದಿಯಲ್ಲಿ ನಿಂತು ಕೇಳಿದ್ದೇನೆ. ಜಾತಿ ವ್ಯವಸ್ಥೆ ಬಗ್ಗೆ ಅವರಿಗೆ ಅಪಾರ ಆಕ್ರೋಶ, ನೋವಿತ್ತು” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ಮನು ಕುಲದ ಒಳಿತಿಗೆ ಹತ್ತಿರವಾಗಿರುವಂತದ್ದು, ಸಕಲ ಜೀವಿಗಳಿಗೆ ಮನುಷ್ಯ ಸಿದ್ದಾಂತಗಳನ್ನು ಬೋಧಿಸುವ ಧರ್ಮ ಬೌದ್ಧ ಧರ್ಮವಾಗಿದೆ. ಪ್ರೊ. ಕೃಷ್ಣಪ್ಪ ಅಂಬೇಡ್ಕರ್ ವಾದದೊಂದಿಗೆ ಬೌದ್ಧ ಧರ್ಮವನ್ನು ಅರಿತವರು. ಇಂದಿನ ಸಂದರ್ಭದಲ್ಲಿ ಮಾರ್ಗದರ್ಶಕರಾಗಿ ಕೃಷ್ಣಪ್ಪನವರು ಹೆಚ್ಚು ಪ್ರಸ್ತುತ” ಎಂದು ಅಭಿಪ್ರಾಯಪಟ್ಟರು.
“ಚದುರಿ ಹೋಗಿರುವ ಮಾದಿಗ ಸಮುದಾಯವನ್ನು ಒಳಮೀಸಲಾತಿ ಆದೇಶ ಬಂದ ನಂತರ ಧೃವೀಕರಣ ಮಾಡುವ ಪರಿಸ್ಥಿತಿ ಬಂದಿದೆ. 1927ರಲ್ಲಿ ಸಮುದಾಯದ ಇಬ್ಬರು ಸ್ವಾಮಿಗಳಿದ್ದರು. ಇಂದು ಏಳು ಜನರಿದ್ದಾರೆ. ಏಕೆ ಎಂದು ಪ್ರಶ್ನಿಸಬೇಕಾಗಿದೆ. 1980ರಲ್ಲಿ ಎರಡು ಸಂಘಟನೆಗಳಿದ್ದವು. ಇಂದು ಹಲವಾರು ಸಂಘಟನೆಗಳಿವೆ. ಆದರೆ ಇಂದು ಸಮುದಾಯ ಕಟ್ಟುವ ಕೆಲಸ ಆಗುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

“ಒಳಮೀಸಲಾತಿ ಜಾರಿಯ ಕ್ರೆಡಿಟ್ ಅನ್ನು ಕಾಂಗ್ರೆಸ್, ಬಿಜೆಪಿಯಲ್ಲಿರುವ ಸಮುದಾಯದ ನಾಯಕರು ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಸಮುದಾಯ ಏನು ತಿಳಿದುಕೊಳ್ಳುಬಹುದು ಎಂದು ಅವರು ಯೋಚಿಸಬೇಕಾಗಿದೆ. ಮಾಧುಸ್ವಾಮಿ ಕಮಿಟಿ ಇಂದಿನ ಪರಿಸ್ಥಿತಿಗೆ ಪ್ರಸ್ತುತವಲ್ಲ, ಕಾರಣ ಅದಕ್ಕೆ ಎಂಪರಿಕಲ್ ಡಾಟಾ ಇಲ್ಲ” ಎಂದು ತಿಳಿಸಿದರು.

“ಬೆಂಗಳೂರಿನಲ್ಲಿ ಏಳು ಲಕ್ಷ ಸಮುದಾಯವಿದೆ ಎಂದು ಸಮೀಕ್ಷೆ ಹೇಳಿದೆ. ಒಟ್ಟಾರೆ ನಲವತ್ತು ಲಕ್ಷ ನಮ್ಮ ಅಂದಾಜಿದೆ. ಬೆಂಗಳೂರುನಲ್ಲಿಯೇ ಸಮೀಕ್ಷೆ ಸರಿಯಾಗಿಲ್ಲವೆಂದರೆ ಹೇಗೆ ಬೇರೆ ಕಡೆ ಸಮೀಕ್ಷೆ ನೆಡೆಸಿದ್ದೀರಿ ಎಂದು ಪ್ರಶ್ನೆಯಿದೆ. ಸಮುದಾಯದಲ್ಲಿ ಸದ್ಯ ಪರಿಸ್ಥಿತಿ ಸುಧಾರಿಸಿದೆ. ಈಗಿನ ಪೀಳಿಗೆಗೆ ಒಳಮೀಸಲಾತಿ ಜಾರಿ ಸ್ವಲ್ಪ ಮಟ್ಟಿಗೆ ಉದ್ಯೋಗ ಕೊಟ್ಟರೂ, ಮುಂದಿನ ಹತ್ತು ಹದಿನೈದು ವರ್ಷಗಳ ನಂತರ ಸಮುದಾಯದಲ್ಲಿ ನಿರುದ್ಯೋಗ ಮತ್ತೆ ಕಾಡಲಿದೆ. ಅದಕ್ಕೆ ಮುಂದೆನು ಎಂದು ಸಮುದಾಯ ಉತ್ತರ ಕಂಡುಕೊಳ್ಳಬೇಕಾಗಿದೆ” ಎಂದು ಎಚ್ಚರಿಸಿದರು .
ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್. ಮಾರಪ್ಪ ಮಾತನಾಡಿ, “ಇಂದು ಸಂವಿಧಾನ ಉಳಿಸುವ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ. ಆದರೆ ಒಂದು ಸಮುದಾಯ ಮಾತ್ರ ಉಳಿಸಲು ಸಾಧ್ಯವಿಲ್ಲ. ಉತ್ತರ ಭಾರತದವರು ಸೇರಿದಂತೆ ಎಲ್ಲಾ ಪರಿಶಿಷ್ಟ ಜೊತೆಗೆ ಹೋರಾಡಿದರೆ ಸಂವಿಧಾನ ಉಳಿಸಲು ಸಾಧ್ಯ. ಇಂದಿನ ಪ್ರಸ್ತುತ ಸಂದರ್ಭದಲ್ಲಿ ಸಮುದಾಯದ ಧೃವೀಕರಣ, ಕಟ್ಟುವಿಕೆ, ಮುಂದುವರೆಸುವಿಕೆ ಮಾದಿಗ ಸಮುದಾಯದಿಂದ ಮಾತ್ರ ಸಾಧ್ಯ. ಇದಕ್ಕೆ ಚಿಂತಕರು, ಹೋರಾಟಗಾರರು ಮಾರ್ಗದರ್ಶಕರಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

“ಭಾರತದ ಸಂಪತ್ತು, ಭೂಮಿಯನ್ನು ಸಮನಾಗಿ ಹಂಚುವ ಬಗ್ಗೆ ಡಾ. ಬಿಆರ್ ಅಂಬೇಡ್ಕರ್ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಿದ ಅವರ ಆಶಯದ ಬಗ್ಗೆ ಇಂದು ಯಾರೂ ಕೂಡ ಮಾತನಾಡುತ್ತಿಲ್ಲ. ಪ್ರೊ.ಕೃಷ್ಣಪ್ಪ ಇರುವವರೆಗೂ ಭೂಮಿ ಹೋರಾಟದ ಬಗೆ ಹೆಚ್ಚು ಚರ್ಚೆ, ಹೋರಾಟ ನಡೆಯುತ್ತಿತ್ತು. ಮಾದಿಗ ಸಮುದಾಯಕ್ಕೆ ರಾಜ್ಯಾಧಿಕಾರ ಬೇಕು. ಆದರೆ ಯಾರು ಅಧಿಕಾರ ಮಾಡಿದರೂ ಸಮುದಾಯಕ್ಕೆ ಏನು ಸಿಗುತ್ತದೆ ಎಂದು ಪ್ರಶ್ನೆ ಮೂಡುತ್ತದೆ. ಅಧಿಕಾರ ಮಾತ್ರ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಚಳ್ಳಕೆರೆ, ಗೋಸಿಕೆರೆ ಸೇರಿ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರ ಭಾವೈಕ್ಯತಾ ಹಬ್ಬ ಮೊಹರಂ ಆಚರಣೆಯ ಸಡಗರ
ಕಾರ್ಯಕ್ರಮದಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯ ಅಧ್ಯಕ್ಷ ಕೆ ಕುಮಾರ್, ಮುಖಂಡ ಪ್ರೊ.ಸಿಕೆ ಮಹೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ದುರುಗೇಶಪ್ಪ, ಪರಿಶಿಷ್ಟ ಜಾತಿ, ಪಂಗಡದ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಲೇಖಕಿ ಮತ್ತು ಬರಹಗಾರ್ತಿ ದು. ಸರಸ್ವತಿ, ನಂದಗೋಪಾಲ್, ಚಿಕ್ಕಣ್ಣ, ಶಂಕರ್, ನಿ. ಪ್ರಾಂಶುಪಾಲ ಬಸವರಾಜ್, ಎಂ ಡಿ ರವಿ, ರಾಮಣ್ಣ ಬಾಲೇನಹಳ್ಳಿ, ಶ್ರೀನಿವಾಸಮೂರ್ತಿ, ರಾಮು ಗೋಸಾಯಿ, ಸಿದ್ದೇಶ್, ವಕೀಲರಾದ ರಮೇಶ್, ಪ್ರದೀಪ್, ವಿಶ್ವಾನಂದ, ಆನಂದ್, ರಾಮಲಿಂಗಪ್ಪ ಸೇರಿದಂತೆ ಚಿತ್ರದುರ್ಗದ ಸಾಮಾಜಿಕ ಸಂಘರ್ಷ ಸಮಿತಿಯ ಮುಖಂಡರು, ಸದಸ್ಯರು ಹಾಗೂ ತುಮಕೂರು ಪರಿಶಿಷ್ಟ ಜಾತಿ ಪಂಗಡದ ನೌಕರರ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಮುದಾಯದ ಬಂಧುಗಳು ಭಾಗವಹಿಸಿದ್ದರು.