ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅವ್ಯವಹಾರ ತನಿಖೆ ಮತ್ತು ಆಡಳಿತಾಧಿಕಾರಿ ನಿಯೋಜನೆಗೆ ಒತ್ತಾಯಿಸಿ ಅನಾಥ ಸೇವಾಶ್ರಮ ರಕ್ಷಣಾ ಸಮಿತಿ ನೆಡೆಸುತ್ತಿರುವ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದ್ದು, ಎಂಟನೇ ದಿನದ ಪ್ರತಿಭಟನೆ ನೆಡೆಯುವ ಸ್ಥಳಕ್ಕೆ ಚಿತ್ರದುರ್ಗ ಉಪವಿಭಾಗಾಧಿಕಾರಿ, ಜಿಲ್ಲಾ ರಿಜಿಸ್ಟ್ರಾರ್, ತಹಶೀಲ್ದಾರವರು ಭೇಟಿ ನೀಡಿ ಪರಿಶೀಲನೆ ನೆಡೆಸಿ ಪರಿಹರಿಸುವ ಭರವಸೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಆಶ್ರಮದ ಬಳಿ ನಡೆಯುತ್ತಿದ್ದ ಎಂಟನೇ ದಿನದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಉಪವಿಭಾಗಾಧಿಕಾರಿಗಳು ಮತ್ತು ಅಧಿಕಾರಿಗಳು ಅನಾಥ ಸೇವಾಶ್ರಮ ರಕ್ಷಣಾ ಸಮಿತಿಯ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಬೇಡಿಕೆಗಳನ್ನು ಅತಿ ಬೇಗ ಬಗೆಹರಿಸಿಕೊಡುತ್ತೇವೆ, ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಮುಖಂಡ ಸಂತೋಷ್ “ತಿರುಕ ಎಂದೇ ಹೆಸರಾಗಿದ್ದ ರಾಘವೇಂದ್ರ ಗುರೂಜಿ ಕಟ್ಟಿದ ಮಲ್ಲಾಡಿಹಳ್ಳಿ ಆಶ್ರಮದ ಉಳಿವಿಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಉಪವಿಭಾಗಾಧಿಕಾರಿ, ಜಿಲ್ಲಾ ರಿಜಿಸ್ಟ್ರಾರ್, ತಹಶೀಲ್ದಾರರವರು ಭೇಟಿ ನೀಡಿ ಆಡಳಿತಾಧಿಕಾರಿ ನೇಮಕ ಮತ್ತು ಅವ್ಯವಹಾರ ತನಿಖೆಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಭರವಸೆಗೆ ಗೌರವಿಸುವ ಸಲುವಾಗಿ ಕಾಲಾವಕಾಶ ನೀಡಿ ವಿರಾಮ ಹಾಕಲಾಗಿದೆ. ಭರವಸೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಹೋರಾಟಕ್ಕೆ ಸಹಕಾರ ಕೊಟ್ಟ ಹೋರಾಟದ ಎಲ್ಲಾ ಸಮಿತಿಯವರಿಗೆ, ಗ್ರಾಮಸ್ಥರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ, ಆಶ್ರಮದ ಭಕ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪತ್ರಕರ್ತರ ಮೇಲೆ ಹಲ್ಲೆ ವಿರುದ್ಧ ಕ್ರಮಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಭಟನೆ
ಈ ವೇಳೆ ಓಂಕಾರ ಮೂರ್ತಿ ವಕೀಲರು, ಉಮೇಶ್, ಶರತ್ ಕುಮಾರ್, ಚೇತನ್, ದುಮ್ಮಿ ಚಿಕ್ಕಪ್ಪ ಸಿದ್ದಪ್ಪ, ಪತ್ರಕರ್ತ ಚಿತ್ತಪ್ಪ, ಮನ್ಸೂರ್ ಪಾಷಾ, ಶಿವಪುರ ಹಾಲೇಶ್, ಚನ್ನಪ್ಪನಹಟ್ಟಿ ಜಯ್ಯಪ್ಪ ಗೌಡ, ವಿನೋದ್, ಆಂಜಿನಪುರ ಜಗನ್ನಾಥ, ಕೆಂಗುಂಟೆ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ರಾಮಘಟ್ಟ ನಾಗರಾಜ್, ಕೆಂಗುಂಟೆ ಘಟ್ಟಿ ಓಂಕಾರಪ್ಪ, ಮಲ್ಲಾಡಿಹಳ್ಳಿ ವೆಂಕಟೇಶ್, ಗೋಪಾಲಪ್ಪ ಶಿಕ್ಷಕರು, ಮುಸ್ಲಿಂ ಮುಖಂಡ ಇಮ್ರಾನ್ ಸಾಬ್, ಗ್ರಾಮ ಪಂಚಾಯಿತಿ ಸದಸ್ಯ ಬಾಬೂಜಿ ಸೇರಿದಂತೆ ನೂರಾರು ಮುಖಂಡರು, ಆಶ್ರಮದ ಭಕ್ತರು, ಅನಾಥ ಸೇವಾಶ್ರಮ ರಕ್ಷಣಾ ಸಮಿತಿಯ ಸದಸ್ಯರು ಹಾಜರಿದ್ದರು.