ರೈತರ ತೋಟದ ಮನೆ, ಜಮೀನುಗಳಿಗೆ ರಾತ್ರಿ ವೇಳೆ ಮನೆ ಬಳಕೆ ವಿದ್ಯುತ್ ಪೂರೈಸದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮತ್ತು ಮೊಳಕಾಲ್ಕುರು ತಾಲ್ಲೂಕು ರೈತ ಸಂಘಗಳ ಒಕ್ಕೂಟದಿಂದ ನೂರಾರು ರೈತರು ಚಳ್ಳಕೆರೆ ಬಳಿಯ ಗರಣಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಟ್ರ್ಯಾಕ್ಟರ್ ಹಾಗೂ ಜಾನುವಾರುಗಳೊಂದಿಗೆ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, “ರಾತ್ರಿ ವೇಳೆ ತೋಟಗಳಲ್ಲಿ ವಾಸಮಾಡುವ ಮನೆಗೆ ವಿದ್ಯುತ್ ನೀಡದೆ, ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತಿದೆ.ರಾತ್ರಿ ಸಮಯ ಹೊಲಗಳಲ್ಲಿ ಕೆಲಸ ಮಾಡುವಾಗ ಕತ್ತಲಲ್ಲಿ ಹಾವು ಚೇಳು, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮೀಣ ರೈತರ ಬದುಕನ್ನ ಮೂರಾಬಟ್ಟೆ ಮಾಡಿ ತೋಟದ ಮನೆಗಳಲ್ಲಿ ವಾಸ ಮಾಡುತ್ತಿರುವ ರೈತ ಕುಟುಂಬಗಳ ಬದುಕನ್ನೇ ಹಾಳು ಮಾಡಲಾಗಿದೆ. ರೈತರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಆದೇಶ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, “ರೈತರ ಜಮೀನುಗಳಿಗೆ ವೊಲ್ವೇಜ್ ಇಲ್ಲದ ವಿದ್ಯುತ್ ನೀಡಿ ಮೋಟಾರ್ ಗಳು ಸುಟ್ಟು ಹೋಗುತ್ತಿವೆ. ಬೆಳೆ ನಷ್ಟದಿಂದ ಸಾಲದ ಹೊರೆಯಾಗುತ್ತಿದೆ. ರೈತರ ಸಾಲ ವಸೂಲಾತಿಗೆ ಬ್ಯಾಂಕ್‌ಗಳು ನೋಟೀಸ್, ಕಿರುಕುಳ ನೀಡುತ್ತಿವೆ. ಸಾಲಕ್ಕೆ ಆಸ್ತಿ ಹರಾಜು, ಬೆಳೆ ಕಳ್ಳತನ, ಸಾಲದ ಸುಳಿಗೆ ಸಿಲುಕಿ ನಲುಗಿದ ರೈತರು ಸಾವು ಬದುಕಿನ ಜೊತೆ ಹೋರಾಡುತ್ತಿದ್ದಾರೆ. ಸರ್ಕಾರ, ಜಿಲ್ಲಾಡಳಿತ ರೈತರನ್ನು ರಕ್ಷಿಸಲು ಸರ್ಕಾರದ ಅನುದಾನವನ್ನು ರೈತರಿಗೆ, ಕೂಲಿಕಾರರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಳ್ಳಿಯ ಜನರ ಬದುಕಿಗೆ ಶಕ್ತಿ ತುಂಬಬೇಕೆಂದು ನಿಷ್ಕ್ರಿಯ ಭ್ರಷ್ಟ ಅಧಿಕಾರಿಗಳಿಂದ ಅಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸುತ್ತಿದ್ದೇವೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಇಂಧನ ಸಚಿವರ ಭೇಟಿ, ವಿದ್ಯುತ್ ಸಮಸ್ಯೆ ನಿವಾರಣೆಗೆ ರೈತಸಂಘ ಆಗ್ರಹ
ನೂರಾರು ಸಂಖ್ಯೆಯಲ್ಲಿ ಟ್ಯಾಕ್ಟರ್ ಎತ್ತಿನಗಾಡಿ ಬೈಕ್ ನಲ್ಲಿ ಬಂದಿದ್ದ ರೈತರು ಗರಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ವಾಹನಗಳನ್ನು ತಡೆದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನೆಯಲ್ಲಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು, ಹಲವು ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.