“ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರದಿಂದ ನೆಡೆಸುತ್ತಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಹಲವು ಲೋಪಗಳು ಮತ್ತು ದೋಷಗಳು ಉಂಟಾಗಿವೆ. ಕೂಡಲೇ ಸಮಸ್ಯೆ ಪರಿಹರಿಸಿ ಗಣತಿ ಕಾರ್ಯ ನಿಖರವಾಗುವಂತೆ ಮಾಡಬೇಕು” ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ ಒತ್ತಾಯಿಸಿದೆ.
ಚಿತ್ರದುರ್ಗದಿಂದ ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಮಂಗಳವಾರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಏಕ ಸದಸ್ಯ ವಿಚಾರಣಾ ಆಯೋಗ ನ್ಯಾ. ಡಾ.ಹೆಚ್.ಎನ್.ನಾಗಮೋಹನದಾಸ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, “ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಪ್ರಾರಂಭದಿಂದಲೂ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಂಚರಿಸಿ ಮಾಹಿತಿ ಪಡೆಯಲಾಗಿದೆ. ಈ ವೇಳೆ ಕೆಲವು ಲೋಪಗಳು ಕಂಡು ಬಂದಿವೆ. ಜಾತಿ ಕಾಲಂನಲ್ಲಿ ಆದಿ-ಕರ್ನಾಟಕ, ಆದಿ-ದ್ರಾವಿಡ, ಆದಿ-ಆಂಧ್ರ ಕಡ್ಡಾಯವಾಗಿ ಆಯ್ಕೆ ಮಾಡಿದ ನಂತರ ಉಪ ಜಾತಿಯನ್ನಾಗಿ ಭೋವಿ-ವಡ್ಡರ ಆಯ್ಕೆ ಮಾಡಬಹುದೆಂದು ಜನರಿಗೆ ತಪ್ಪು ಮಾಹಿತಿ ಗಣತಿದಾರರು ನೀಡುತ್ತಿದ್ದಾರೆ. ಜೊತೆಗೆ ಇದೇ ರೀತಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.

“ವಲಸೆಯಲ್ಲಿ ವಾಸ ಮಾಡುತ್ತಿರುವ ಕುಟುಂಬದವರು ಆಧಾರ್ ಸಂಖ್ಯೆ ನೀಡಿದರು, ಗಣತಿದಾರರಿಗೆ ಪೋನ್ ಮಾಡಿ ಹೇಳಿದರೂ, ಗಣತಿಯಲ್ಲಿ ಅವರನ್ನು ಪರಿಗಣಿಸುತ್ತಿಲ್ಲ. ಮಾಹಿತಿ ನೀಡಿದಾಗ ನಿಮ್ಮ ಪೋಟೊ ಬೇಕು ಎಂದು ಅವರ ಮಾಹಿತಿ ಪಡೆಯುತ್ತಿಲ್ಲ.
ಆಯೋಗವು ಪಡಿತರ ಚೀಟಿ, ಆಧಾರ್ ಕಾರ್ಡ್ ಯಾವುದಾದರು ಒಂದನ್ನು ಪಡೆದು ಸಮೀಕ್ಷೆ ನಡೆಸಬಹುದಾಗಿದೆ ಎಂದು ತಿಳಿಸಿದ್ದರೂ ಕೂಡ, ಕೆಲವು ಕಡೆ ಸಮೀಕ್ಷೆದಾರರು ಕೇವಲ ಪಡಿತರ ಚೀಟಿಯನ್ನು ಪಡೆದು ಸಮೀಕ್ಷೆ ನಡೆಸುತ್ತಿದ್ದಾರೆ. ಪಡಿತರ ಚೀಟಿಯಲ್ಲಿ ಹೆಸರಿಲ್ಲದ ವ್ಯಕ್ತಿಗಳ ಮಾಹಿತಿಯನ್ನು ತಿರಸ್ಕರಿಸುತ್ತಿದ್ದಾರೆ. ಹೊಸದಾಗಿ ವಿವಾಹವಾಗಿರುವ ಮತ್ತು ಹೊಸದಾಗಿ ಮನೆ ಕಟ್ಟಿಕೊಂಡಿರುವ ಅಥವಾ ಬೇರೆ ಇರುವ ಕುಟುಂಬಗಳ ಮಾಹಿತಿಯನ್ನು ಗಣತಿದಾರರು ತೆಗೆದುಕೊಳ್ಳುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಆಯೋಗವು ಭೋವಿ ಪದಕ್ಕೆ ಪರಿಶಿಷ್ಟ ಜಾತಿ ಕೋಡ್ ಸಂಖ್ಯೆ 23.1 ಎಂದು ಅವಕಾಶ ನೀಡಿದರು ಕೂಡಾ ಕೆಲವು ಕಡೆ ಎಸ್‌ಸಿ ಅಲ್ಲದವರು ಎಂದು ಸಮೀಕ್ಷೆಯಿಂದ ದೂರ ಉಳಿಯುವಂತೆ ಮಾಡುತ್ತಿದ್ದಾರೆ” ಎಂದು ದೂರಿದರು.
“ಜೊತೆಗೆ ಪಡಿತರ ಚೀಟಿ ಹೊಂದಿರುವ ಕೆಲವು ಕುಟುಂಬದವರನ್ನು ಎಸ್‌ಸಿ ಇದ್ದರೂ ಎಸ್‌ಟಿ ಎಂದು ತೋರಿಸುತ್ತಿದ್ದಾರೆ. ಮತದಾನ ಚೀಟಿ ತೋರಿಸಿದರು ಸಹ ಅವರು ಇಲ್ಲಿನ ನಿವಾಸಿಗಳು ಅಲ್ಲವೆಂದು ಆನ್‌ಲೈನ್‌ನಲ್ಲಿ ತೋರಿಸುತ್ತಿದೆ ಎಂದು ಗಣತಿದಾರರು ಹೇಳುತ್ತಾರೆ. ಆಧಾರ್‌ಕಾರ್ಡ್ ವಿಳಾಸ ಕರ್ನಾಟಕ ಇದ್ದಾಗ್ಯೂ ಬೇರೆ ರಾಜ್ಯದವರು ಎಂದು ಗಣತಿದಾರರು ಹೇಳಿ ಅವರನ್ನು ಗಣತಿಯಿಂದ ಕೈಬಿಡುತ್ತಿದ್ದಾರೆ. ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗೆ, ಸರಿಯಾದ ತರಬೇತಿ ನೀಡಲಾಗಿಲ್ಲ, ಪರಿಣಾಮವಾಗಿ ಅವರು ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯನ್ನು ತತ್‌ಕ್ಷಣ ನಿಲ್ಲಿಸಿ ಅವರಿಗೆ ಮತ್ತೊಮ್ಮೆ ಒಂದು ದಿನದ ತರಬೇತಿ ನೀಡಬೇಕು” ಎಂದು ಒತ್ತಾಯಿಸಿದರು.
“ಸಮೀಕ್ಷೆ ನಡೆಸುತ್ತಿರುವ ಕೆಲ ಸಿಬ್ಬಂದಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನಮೂದಿಸುತ್ತಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ದೂರುಗಳು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಮೀಕ್ಷೆಗೆ ನಿಗದಿಪಡಿಸಿರುವ ಕಾಲಮಿತಿ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ತಾವು ಮನೆ ಮನೆ ಸಮೀಕ್ಷೆ ಕಾಲಮಿತಿಯನ್ನು ವಿಸ್ತರಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರೀತಿಸಿ ಜಾತಿ ಕಾರಣಕ್ಕೆ ಮದುವೆಗೆ ನಿರಾಕರಣೆ ಆರೋಪ, ಯುವತಿ ಆತ್ಮಹತ್ಯೆ.
“ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಎಂದು ಜಾತಿಯನ್ನು ಗುರುತಿಸಿದಾಗ ಉಪಜಾತಿ ಕಾಲಂ ನಲ್ಲಿ ಭೋವಿ ವಡ್ಡರಿಗೆ ಸಂಬಂಧಿಸಿದ ಯಾವುದೇ ಜಾತಿಗಳನ್ನು ತೋರಿಸದಂತೆ ಸದರಿ ಕಾಲಂನ್ನು ಅಭಿವೃದ್ಧಿಪಡಿಸಬೇಕು. ಹೀಗೆ ಹಲವಾರು ನ್ಯೂನ್ಯತೆಗಳನ್ನು ಕೂಡಲೇ ಸರಿಪಡಿಸಿ ಜಾತಿ ಗಣತಿ ಮಾಡಬೇಕು” ಎಂದು ಒತ್ತಾಯಿಸಿದರು.
ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ, ಹಾವೇರಿ ರವಿ ಪೂಜಾರ್, ಚಿತ್ರದುರ್ಗದ ಭೋವಿ ನಿಗಮದ ಮಾಜಿ ಸದಸ್ಯ ಕಾಳಘಟ್ಟ ಹನುಮಂತಪ್ಪ, ನಿವೃತ್ತ ನ್ಯಾಯಮೂರ್ತಿ ವೆಂಕಟೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.