ಚಿತ್ರದುರ್ಗದ ಮಸ್ಜಿದ್ ಎ ಅಲಾ, ಧಮ್ಮ ಕೇಂದ್ರ, ವಿಮುಕ್ತಿ ವಿದ್ಯಾ ಸಂಸ್ಥೆ ಮತ್ತು ಶಾಂತಿ & ಸೌಹಾರ್ದ ವೇದಿಕೆ ಇವರ ವತಿಯಿಂದ ರಂಜಾನ್ ಮಾಸದ ಪ್ರಯುಕ್ತ ಮುಸ್ಲಿಂ, ಕೃೆಸ್ತ ಮತ್ತು ಹಿಂದೂ ಧರ್ಮೀಯರಿಂದ ಮಸ್ಜಿದ್ ಎ.ಅಲಾ ಮಸೀದಿಯಲ್ಲಿ ಸೌಹಾರ್ದ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು.

ಮಸ್ಜಿದ್ ಎ.ಅಲಾ ಮಸೀದಿಯ ಮುಖಂಡರಾದ ದಾದಾಪೀರ್ ಮಾತನಾಡಿ, “ಸರ್ವ ಧರ್ಮಿಯರು ಸೇರಿ ಇಪ್ತಾರ್ ಕೂಟ ಹಮ್ಮಿಕೊಂಡಿರುವುದು ಸಮಯೋಚಿತವಾಗಿದೆ. ಮಹಮದ್ ಫೃೆಗಂಬರ್ ಜಗತ್ತಿನ ಶಾಂತಿ ಬಯಸಿದವರು ಮತ್ತು ಶಾಂತಿ ಸಂದೇಶ ನೀಡಿದವರು. ಅಲ್ಲಾ, ನಿರಾಹಾರಿ, ನಿರಾಕಾರಿ ಆದ್ದರಿಂದಲೇ ಭಗವಂತ ಅನ್ನುತ್ತಾರೆ. ಜಗತ್ತಿನ ಜೀವರಾಶಿಗೆ ಒಳಿತನ್ನು ಬಯಸುವನೇ ಭಗವಂತ. ಹಾಗಾಗಿ ಎಲ್ಲಾ ಧರ್ಮಗಳಲ್ಲೂ ಶಾಂತಿಯನ್ನು ಕಾಣಬಹುದು” ಎಂದು ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ಮಾತನಾಡಿ, “ಮುಸ್ಲಿಂ ಸಮುದಾಯದಲ್ಲಿ ಪರಸ್ಪರ ಗೌರವಿಸುವುದು. ಗೌರವ ಭಾವನೆಯಿಂದ ನಡೆದುಕೊಳ್ಳುವುದು ಈ ಧರ್ಮದ ಮೂಲಮಂತ್ರ. ಒಬ್ಬರಿಗೊಬ್ಬರು ಗೌರವಿಸುವುದು, ಪ್ರೀತಿಸುವುದು, ಶಾಂತಿ & ಸೌಹಾರ್ದತೆಯಿಂದ ನಡೆದುಕೊಳ್ಳುವ ಮೂಲಕ ಸೌಹಾರ್ದ ಸಮಾಜ ಕಟ್ಟಬೇಕಿದೆ” ಎಂದು ಆಶಯ ವ್ಯಕ್ತಪಡಿಸಿದರು.

ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಆರ್.ವಿಶ್ವ ಸಾಗರ್ ಮಾತನಾಡಿ, “ದೇಶ, ರಾಜ್ಯ, ಜಿಲ್ಲೆಯಲ್ಲೂ ಶಾಂತಿ ವಾತಾವರಣ ನಿರ್ಮಾಣವಾಗಬೇಕು. ಕೆಲ ಶಕ್ತಿಗಳ ವಿಚಾರದಲ್ಲಿ ಜಾಗ್ರತೆ ಅಗತ್ಯವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಮಾಜ ಪರಿವರ್ತನಾ ಚಳುವಳಿಯಿಂದ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಅಭಿಯಾನ
ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಫಾದರ್ ಅಲೆಕ್ಸಾಂಡರ್, ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್, ತಮಟಕಲ್ಲು ಹನುಮಂತಪ್ಪ, ಹೆಚ್.ಕುಮಾರ್, ಅರಣ್ಯ ಸಾಗರ್, ವಿಮುಕ್ತಿ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ವಿಶ್ವ ಸಾಗರ್, ಬೀಬಿಜಾನ್, ಕೆ.ಬಿ.ನಾಗರತ್ನಮ್ಮ, ಟಿ.ಶಫೀವುಲ್ಲಾ, ಬೃೆಲಮ್ಮ ಮತ್ತು ಅಲಾ ಮಸ್ಜಿದ್ ನ ಮುಖಂಡರು ಪಾಲ್ಗೊಂಡಿದ್ದರು