ಕಾಲೇಜು ವಿದ್ಯಾರ್ಥಿನಿಯೊಬ್ಬರು ಕೊಲೆಯಾಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿತ್ರದುರ್ಗ ನಗರದ ಹೊರವಲಯದ ಗೋನೂರು ಬ್ರಿಡ್ಜ್ ಬಳಿ (ಹೊಸ ಬೈಪಾಸ್ ) ಖಾಲಿ ಜಮೀನಿನಲ್ಲಿ ಕುರುಚಲು ಪೊದೆಗಳಲ್ಲಿ ವಿದ್ಯಾರ್ಥಿನಿಯ ಮೃತ ದೇಹ ಪತ್ತೆಯಾಗಿದೆ. ದೇಹವನ್ನು ಗಮನಿಸಿರುವ ಹೋಟೆಲ್ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸಾಮೂಹಿಕ ಅತ್ಯಾಚಾರ ಎಸಗಿದ ಮತ್ತು ಸುಟ್ಟುಹಾಕಲು ಪ್ರಯತ್ನ ಮಾಡಿರುವ ಕೃತ್ಯದ ಶಂಕೆಯನ್ನು ದಲಿತ ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮರ್ಯಾದೆ ಹತ್ಯೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟ ಯುವತಿಯು ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊವೇರಹಟ್ಟಿ ಗ್ರಾಮದ ನಿವಾಸಿ ವರ್ಷಿತಾ (19) ಎಂದು ಗುರುತಿಸಲಾಗಿದೆ. ಯುವತಿ ದಲಿತ ಸಮುದಾಯಕ್ಕೆ ಸೇರಿದ್ದು, ಚಿತ್ರದುರ್ಗ ನಗರದಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಯುವತಿ ವಿದ್ಯಾರ್ಥಿ ನಿಲಯದಲ್ಲಿ ವಾಸವಿದ್ದು ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಮೊಬೈಲ್ ಸಂಖ್ಯೆ ಆದರಿಸಿ ಆಕೆಯ ಸ್ನೇಹಿತನೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

“ಹೋಟೆಲ್ ಸಿಬ್ಬಂದಿಯೊಬ್ಬರು ನೀಡಿದ ಮಾಹಿತಿ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ತ್ರೀವ್ರಗತಿಯಲ್ಲಿ ನಡೆಯುತ್ತಿದ್ದು, ಪ್ರಕರಣ ಸಂಬಂಧ ಶಂಕಿತರೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಶೀಘ್ರದಲ್ಲಿ ಒಂದು ಹಂತಕ್ಕೆ ಬರಲಿದ್ದು, ಯಾರೇ ಅಪರಾಧ ಮಾಡಿದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ” ಎಂದು ಪೊಲೀಸರ ಮಾಹಿತಿ ಆದರಿಸಿ ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಪೋಷಕರಿಗೆ ಸಾಂತ್ವನ ಹೇಳಿ ವೈಯಕ್ತಿಕ ಮತ್ತು ಜಿಲ್ಲಾಡಳಿತದ ವತಿಯಿಂದ 5 ಲಕ್ಷ ಪರಿಹಾರ ವಿತರಿಸಲಾಗಿದೆ.
ಈದಿನ ಡಾಟ್ ಕಾಮ್ ನೊಂದಿಗೆ ದಲಿತ ಮುಖಂಡ, ಕರುನಾಡ ವಿಜಯಸೇನೆ ಸಂಘಟನೆಯ ಅಧ್ಯಕ್ಷ ಶಿವಕುಮಾರ್ ಮಾತನಾಡಿ “ಆಗಸ್ಟ್ 14 ರಂದು ಮನೆಗೆ ಹೋಗುವುದಾಗಿನಿಂದ ವಿದ್ಯಾರ್ಥಿನಿಲಯದಿಂದ ರಜೆ ತೆಗೆದುಕೊಂಡು ಚಿಕ್ಕಮ್ಮನ ಮನೆಗೆ ಯುವತಿ ಹೋಗಿದ್ದಾಳೆ. ಎರಡು ದಿನದ ನಂತರ ಅಲ್ಲಿಂದ ಹೊರಟು ನಾಪತ್ತೆಯಾದವಳು ಆ.19ರಂದು ಶವವಾಗಿ ಅರಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಯುವತಿಯ ಸ್ನೇಹಿತನೊಬ್ಬ ಕರೆಮಾಡಿ ಕರೆಸಿಕೊಂಡ ಅನುಮಾನ ವ್ಯಕ್ತವಾಗಿದೆ. ಸಾಮೂಹಿಕವಾಗಿ ಕೊಲೆ ಮಾಡಿರುವ ಶಂಕೆ ಇದೆ. ಇದನ್ನು ಒಬ್ಬರೇ ವ್ಯಕ್ತಿ ಮಾಡಲು ಸಾಧ್ಯವಿಲ್ಲ ಎನ್ನುವ ಅನುಮಾನ ಇದೆ. ಆದ್ದರಿಂದ ಈ ಪ್ರಕರಣದಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಅಪರಾಧಿಗಳನ್ನು ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಡಬಾರದು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬಳು ಗೃಹಿಣಿ ಬಲಿ
“ಅಲ್ಲದೆ ಕುಟುಂಬಸ್ಥರು ಮತ್ತು ಸಂಘಟನೆಗಳು ಪ್ರತಿಭಟನೆ ಮಾಡುವವರೆಗೂ ಜಿಲ್ಲೆಯ ರಾಜಕಾರಣಿಗಳು ಈ ಕಡೆ ಗಮನ ಹರಿಸಿಲ್ಲ. ಸಂಘಟನೆಗಳ ಪ್ರತಿಭಟನೆಯ ನಂತರ ಉಸ್ತುವಾರಿ ಮಂತ್ರಿಗಳು ಮತ್ತು ಇತರ ರಾಜಕೀಯ ನಾಯಕರು ಗಮನಹರಿಸಿದ್ದಾರೆ. ಅಲ್ಲದೆ ದಲಿತ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕೇವಲ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇದು ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಬಾಲಕಿಯ ಕುಟುಂಬಸ್ಥರಿಗೆ ನ್ಯಾಯಯುತವಾದ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
https://shorturl.fm/jUAwR