ಚಿತ್ರದುರ್ಗ | ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು: ಉಪವಿಭಾಗಾಧಿಕಾರಿ ಎಂ ಕಾರ್ತಿಕ್

Date:

Advertisements

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ ರೂಢಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಉಪವಿಭಾಗಾಧಿಕಾರಿ ಎಂ ಕಾರ್ತಿಕ್ ಕರೆ ನೀಡಿದರು.

ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

“ಕುವೆಂಪು ಅವರು ರಾಜ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟರು. ರಾಜ್ಯ ಸರ್ಕಾರ ಕುವೆಂಪು ಅವರ ಜನ್ಮದಿನವನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಘೋಷಿಸುವ ಮೂಲಕ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ ಬೆಳೆಸುವ ಉದ್ದೇಶ ಹೊಂದಿದೆ. ನಾವೆಲ್ಲರೂ ಗುಡಿ, ಚರ್ಚ್, ಮಸೀದಿಗಳೆಂಬ ಭೇದ ಭಾವದಿಂದ ಹೊರಬಂದು ವಿಶ್ವ ಮಾನವರಾಗಬೇಕು. ಎಲ್ಲ ಧರ್ಮಗಳ ಉತ್ತಮ ಸಾರಾಂಶಗಳನ್ನು ಅಳವಡಿಸಿಕೊಳ್ಳಬೇಕು. ಶಾಲಾ ಮಕ್ಕಳು ಎಲ್ಲ ಮೂಢನಂಬಿಕೆಗಳನ್ನು ತೊರೆದು ಪ್ರಗತಿಗಾಗಿ ದೃಢನಿಶ್ಚಯ ಮಾಡಬೇಕು” ಎಂದರು.

Advertisements

ಕನ್ನಡ ಉಪನ್ಯಾಸಕ ಡಾ ಬಿ ಎಂ ಗುರುನಾಥ್ ಮಾತನಾಡಿ, “ಕೀರ್ತಿ ಶನಿ ತೊಲಗಾಚೆ ದೂರ” ಎಂದು ಹೇಳಿದ ಕುವೆಂಪು ಅವರಿಗೆ ಹಲವಾರು ಹಾಗೂ ಪುರಸ್ಕಾರಗಳು ಹರಸಿ ಬಂದವು. ಕೀರ್ತಿ ಎಂಬುದು ಮನುಷ್ಯನನ್ನು ಅಹಂಕಾರಿಯನ್ನಾಗಿಸುತ್ತದೆಂದು ಕುವೆಂಪು ಭಾವಿಸಿದ್ದರು. ಶಿವಮೊಗ್ಗ ಜಿಲ್ಲೆ ಕನ್ನಡ ಸಾರಸ್ವತ ಲೋಕ ಹಾಗೂ ಇಡೀ ಮನುಕುಲಕ್ಕೆ ಕುವೆಂಪು ಅವರಂತಹ ಮೇರು ವ್ಯಕ್ತಿತ್ವ ನೀಡಿದ ಗರಿಮೆ ಹೊಂದಿದೆ. ಇದೇ ರೀತಿ ಚಿತ್ರದುರ್ಗ ಜಿಲ್ಲೆಯ ತಳುಕಿನ ಟಿ ಎಸ್ ವೆಂಕಣ್ಣಯ್ಯ ಅವರು ಕುವೆಂಪು ಅವರ ಗುರುಗಳಾಗಿ ಅವರ ಸಾಹಿತ್ಯ ಕೃಷಿಗೆ ದಾರಿ ದೀಪವಾದರು. ಇದು ಈ ಜಿಲ್ಲೆಯ ಗರಿಮೆಯಾಗಿದೆ” ಎಂದರು.

“ಕುವೆಂಪು ತಮ್ಮ ರಾಮಯಣದರ್ಶನಂ ಮಹಾನ್ ಕಾವ್ಯವನ್ನು ಭಕ್ತಿ ಹಾಗೂ ಗೌರವ ಪೂರಕವಾಗಿ ಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರಿಗೆ ಅರ್ಪಿಸಿರುವುದು ಚಿತ್ರದುರ್ಗ ಜಿಲ್ಲೆಗೆ ಜನರಿಗೆ ಹೆಮ್ಮೆ ಅನಿಸುತ್ತದೆ. ‘ಪಾಪಿಗೂದ್ಧಾರವಿಹುದು ಸೃಷ್ಟಿಯ ಮಹದ್ ವ್ಯೂಹ ರಚನೆಯಲಿ’ ಎಂದು ಹೇಳುವ ಮೂಲಕ ಕುವೆಂಪು ಮೂಲ ರಾಮಾಯಣದ ಪ್ರತಿಯೊಂದು ಪಾತ್ರಗಳನ್ನು ರಾಮಯಣದರ್ಶನಂ ಕೃತಿಯಲ್ಲಿ ಉತ್ತಮವಾಗಿ ಚಿತ್ರಿಸಿದ್ದಾರೆ. ‘ಮಮತೆಯ ಸುಳಿ ಮಂಥರೆ’ ರಾಮ ತಾಯಿ ಕೌಸಲ್ಯ, ಲಕ್ಷಣ ಪತ್ನಿ ಊರ್ಮಿಳೆ ಹೀಗೆ ಹಲವಾರು ಸ್ತ್ರೀ ಪಾತ್ರಗಳ ಮೂಲಕ, ಸಮಸ್ತ ಸ್ತ್ರೀ ಕುಲದ ಅಂತಃಸತ್ವವನ್ನು ಕುವೆಂಪು ತೆರೆದು ಇಟ್ಟಿದ್ದಾರೆ. ಇವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ ಹಾಗೂ ‘ಮಲೆಗಳಲ್ಲಿ ಮದುಮಗಳು’ ವಿಶ್ವ ಸಾಹಿತ್ಯ ಚರಿತ್ರೆಯಲ್ಲಿ ಶ್ರೇಷ್ಠ ಸ್ಥಾನ ಪಡೆದಿವೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಆರಂಭದಲ್ಲಿ ಕುವೆಂಪು ಅವರೇ ಹೇಳಿದಂತೆ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಕಃಶ್ಚಿತವಲ್ಲ! ಕುವೆಂಪು ಅವರ ಕನ್ನಡ ಪ್ರೇಮ ಅಗಾಧವಾದದು. ಕನ್ನಡದ ಹೋರಾಟದಲ್ಲಿ ಅವರ ದಿಟ್ಟ ನಿಲುವು ನಮೆಗೆಲ್ಲಾ ಮಾದರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಎಂ ಬಸವರಾಜ್ ಉಪನ್ಯಾಸ ನೀಡಿ ಮಾತನಾಡಿ, “ನಾಡಿನಾದ್ಯಂತ 2015ನೇ ಸಾಲಿನಿಂದ ಪ್ರತಿ ವರ್ಷ ಡಿಸೆಂಬರ್ 29ರಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ರಾಷ್ಟ್ರಕವಿ ಕುವೆಂಪು ಅವರು ನೀಡಿದ ಮಾರ್ಗದರ್ಶನ, ಆದರ್ಶಗಳನ್ನು ನಾಡಿನ ಜನತೆಗೆ ತಿಳಿಸಲು, ಅವರು ಕಟ್ಟಿಕೊಟ್ಟಂತಹ ಪ್ರಕೃತಿಯ ಸೊಬಗಿನ ಸೊಗಡನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದು, ಈ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮತ್ತೆ ಮತ್ತೆ ಮೆಲುಕುಹಾಕುವಂತಹ ಕನ್ನಡ ಕಾವ್ಯ ಪರಂಪರೆಯಲ್ಲಿ ಹೋಗಿರಬಹುದಾದ, ಈಗಾಗಲೇ ರಚಿಸಲ್ಪಟ್ಟ ಕಾವ್ಯಗಳಲ್ಲಿರುವಂತಹ ಕಾವ್ಯ ಶ್ರೇಷ್ಠತೆ, ಪರಂಪರೆ, ಆಧ್ಯಾತ್ಮದ ವೈಚಾರಿಕತೆಯ ವಿಚಾರಗಳನ್ನು ಮೆಲುಕುಹಾಕುವ ಸುಸಂದರ್ಭ ಇದಾಗಿದೆ” ಎಂದರು.

“ಪ್ರತಿಯೊಂದು ಮಗುವೂ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟಿಬರುತ್ತಾನೆ. ತದನಂತರದಲ್ಲಿ ಜಾತಿ, ಮತ, ಧರ್ಮಗಳ ಎಲ್ಲೆಗಳಲ್ಲಿ ಬಂಧಿಸಲ್ಪಡುತ್ತೇವೆ. ಈ ಬಂಧಿಸಲ್ಪಟ್ಟ ವ್ಯಕ್ತಿಯನ್ನು ವಿಶ್ವಮಾನವನಾಗಿಸುವುದೇ ಶಿಕ್ಷಣದ ಪರಮ ಆದ್ಯತೆಯಾಗಬೇಕೆಂದು ಹೊಸ ಪರಿಕಲ್ಪನೆ ಕಟ್ಟಿಕೊಟ್ಟ ರಾಷ್ಟ್ರಕವಿ ಕುವೆಂಪು ಆದರ್ಶ ಪರಂಪರೆಗೆ ನಾಂದಿ ಹಾಡಿದ್ದಾರೆ” ಎಂದರು.

“ಕುವೆಂಪು ಅವರೇ ಹೇಳುವಂತೆ “ಓ ನನ್ನ ಚೇತನ ಆಗು ನೀ ಅನಿಕೇತನ” ಎಂಬ ಪದ್ಯದ ಸಾಲುಗಳನ್ನು ನೋಡುವುದಾದರೆ ಎಲ್ಲಿಯೂ ಕೂಡ ನಿಲ್ಲದೆ, ಯಾವುದೇ ಮತಪಂಥಗಳಿಗೆ ಒಳಗಾಗದೇ, ಪ್ರತಿಯೊಂದನ್ನು ಪರೀಕ್ಷಿಸುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಬಹುದೊಡ್ಡ ಆಸೆ ಕುವೆಂಪು ಅವರದಾಗಿತ್ತು. ಅಂದಿನ ಸಾಮಾಜಿಕ ಚಿತ್ರಣದ ಜತೆಜತೆಯಾಗಿ ಧಾರ್ಮಿಕ ಕಟ್ಟುಪಾಡುಗಳು, ಮೌಢ್ಯ ಅಂಧಕಾರದ ಆಚರಣೆಗಳು, ಜಾತಿಯ ಸಂಕೋಲೆಯಲ್ಲಿ ಮೇಲು-ಕೀಳು ಎಂದು ಮಾನವನನ್ನು ಚಿತ್ರಹಿಂಸೆ ಮಾಡುವ ಸಂದರ್ಭದಲ್ಲಿ ಕುವೆಂಪು ಅವರು ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ರಾಯಭಾರಿಯಂತೆ ಇಡೀ ನಾಡನ್ನು ಸುತ್ತುತ್ತಾ ತಮ್ಮ ಕಾವ್ಯ, ಕೃತಿಗಳ ಮೂಲಕ ಬದುಕು ಕಟ್ಟಿಕೊಟ್ಟ ಮಹಾನ್ ಚೇತನ. ಇವರನ್ನು ರಸಋಷಿ, ಕಾಡಿನ ಕವಿ, ಯುಗದ ಕವಿ, ಜಗದ ಕವಿ ಎನ್ನುವ ಅನೇಕ ಬಿರುದುಗಳಿಂದ ವರ್ಣಿಸಲಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಉಮಲೂಟಿ ಗ್ರಾಮದಲ್ಲಿ ‘ಮನೆ ಮನೆಗೆ ಅಂಬೇಡ್ಕರ್’ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್ ಕೆ ಮಲ್ಲಿಕಾರ್ಜುನ, ಜಿಲ್ಲಾ ವಾರ್ತಾಧಿಕಾರಿ ಬಿ ವಿ ತುಕಾರಾಂರಾವ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಪಿಎಂಜಿಎಸ್‌ವೈ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರರು ನಗರಸಭೆ ವ್ಯವಸ್ಥಾಪಕಿ ಮಂಜುಳಾ, ಕನ್ನಡ ಉಪನ್ಯಾಸಕ ತಿಪ್ಪೇಸ್ವಾಮಿ, ರಂಗನಿರ್ದೇಶಕರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X