“ಕಾಂತರಾಜ್ ವರದಿಯನ್ನು ಸಚಿವ ಸಂಪುಟದಲ್ಲಿ ತರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನಿರ್ಧಾರವನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಕಾಂತರಾಜ್ ಆಯೋಗದ ವರದಿಯನ್ನು ಹೊಟ್ಟೆ ತುಂಬಿದವರು ವಿರೋಧಿಸುತ್ತಾರೆ.
ಹಸಿದವರು ವರದಿ ಜಾರಿಗಾಗಿ ಕಾಯುತ್ತಿರುತ್ತಾರೆ. ಕಾಂತರಾಜ್ ವರದಿ ಬಿಡುಗಡೆಯಾಗಿ ಈ ಸಮುದಾಯಗಳಿಗೆ ಬೆಳಕಾಗಲಿ ಎಂದು ಆಶಿಸುತ್ತೇನೆ” ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕನಕ ಪೀಠದ ಶಾಖಾಮಠದ ಈಶ್ವರಾನಂದಪುರಿ ಶ್ರೀಗಳು ವರದಿಯನ್ನು ಸ್ವಾಗತಿಸಿದರು.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು “ವಿರೋಧ ಪಕ್ಷದವರು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ. ಆದರೆ
ಲಿಂಗಾಯತ ಸಮುದಾಯ ಮತ್ತು ಒಕ್ಕಲಿಗ ಸಮುದಾಯ ಈ ವರದಿಯನ್ನು ವಿರೋಧಿಸುತ್ತಿವೆ ಎಂದು ಹೇಳಲಾಗುತ್ತಿದೆ. ವರದಿ ಬಂದ ಮೇಲೆ ತಮ್ಮ ಆಕ್ಷೇಪಗಳನ್ನು ಮತ್ತು ಅದರಲ್ಲಿನ ಲೋಪದೋಷಗಳನ್ನು ಸರ್ಕಾರದ ಗಮನಕ್ಕೆ ತರಲು ಅವಕಾಶ ಇದೆ” ಎಂದು ಅಭಿಪ್ರಾಯಪಟ್ಟರು.
“ರಾಜ್ಯದ ಅನೇಕ ಹಿಂದುಳಿದ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳು ಸ್ವಾತಂತ್ರ್ಯ ಬಂದು ಇಂದಿನವರೆಗೂ ಗೊತ್ತಿಲ್ಲ. ಕಾಂತರಾಜ್ ವರದಿಯ ಮೂಲಕ ಕುರುಬ, ಈಡಿಗ, ಗೊಲ್ಲ, ಮಡಿವಾಳ, ಬೆಸ್ತ, ಉಪ್ಪಾರ, ವಿಶ್ವಕರ್ಮ, ಸವಿತಾ, ತಿಗಳ, ದೇವಾಂಗ, ಲಮಾಣಿ, ಭೋವಿ, ಕುಂಚಿಟಿಗ, ಮಾದಾರ, ಛಲವಾದಿ, ಹಡಪದ, ಗಾಣಿಗ, ಕುಂಬಾರ, ಹೆಳವ, ಕೊರಮ, ಕೊರಚ ಸೇರಿದಂತೆ ಇನ್ನೂ ಅಲಕ್ಷಿತ ಸಮುದಾಯಗಳು ಜಾತಕ ಪಕ್ಷಿಯಂತೆ ವರದಿ, ಸೌಲಭ್ಯಕ್ಕೆ ಕಾಯುತ್ತಿವೆ” ಎಂದರು.