ಭಾರತ-ಪಾಕಿಸ್ಥಾನ ಮಧ್ಯೆ ಪ್ರತೀಕಾರ, ಪ್ರತಿದಾಳಿಗಳು ನೆಡೆದಿರುವ ಪ್ರಕ್ಷುಬ್ಧ ವಾತಾವರಣ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರದಿಂದ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರತೆ ಒದಗಿಸಲು ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ವಿಶ್ವೇಶ್ವರಯ್ಯ ಜಲ ನಿಗಮದಿಂದ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.

ಪ್ರಸ್ತುತ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟು, ಜಲಾಶಯಗಳಿಗೆ ಬಿಗಿಭದ್ರತೆ ಒದಗಿಸಲು ಸೂಚನೆ ನೀಡಿವೆ. ಇದರ ಭಾಗವಾಗಿ ಹಿರಿಯೂರು ಬಳಿಯ ವಾಣಿ ವಿಲಾಸ ಸಾಗರಕ್ಕೆ ಭದ್ರತೆ ಒದಗಿಸಿದ್ದು, ಸಾರ್ವಜನಿಕರ ಪ್ರವೇಶ ಸೇರಿದಂತೆ ಎಲ್ಲರ ಪ್ರವೇಶ ನಿರ್ಬಂಧಿಸಲಾಗಿದೆ.
ವಿವಿ ಸಾಗರದ ಮುಂಬಾಗದ ಗೇಟ್ನಲ್ಲಿ “ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಜಲಾಶಯದ ಭದ್ರತೆಗಾಗಿ ಪ್ರವೇಶ ನಿಷೇಧಿಸಲಾಗಿದೆ” ಎಂದು ಫಲಕ ಹಾಕಲಾಗಿರುವ ಕಾರಣ ಸಾರ್ವಜನಿಕರು ಪ್ರವೇಶಿಸುವ ಗೇಟ್ ಬಂದ್ ಮಾಡಲಾಗಿದೆ. ವಿಐಪಿ ಗೇಟ್ ಕೂಡ ಸೇರಿದಂತೆ ಎಲ್ಲವನ್ನೂ ಬಂದ್ ಮಾಡಿ, ಇಡೀ ಜಲಾಶಯಕ್ಕೆ ಭದ್ರತೆ ಒದಗಿಸಲಾಗಿದೆ.

ಈ ಸಂಬಂಧ ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಕುಮಾರ್, “ದೇಶದಲ್ಲಿ ನೆಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಜಲಾಶಯಕ್ಕೆ ಭದ್ರತೆ ದೃಷ್ಟಿಯಿಂದ ಎಲ್ಲರಿಗೂ ಪ್ರವೇಶ ನಿರ್ಬಂಧಿಸಿದೆ. ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ, ಸರ್ಕಾರ, ಇಲಾಖೆಯ ಮುಂದಿನ ಆದೇಶದವರೆಗೂ ಪ್ರವೇಶಕ್ಕೆ ನಿರ್ಬಂಧ ಮುಂದುವರೆಯುತ್ತದೆ” ಎಂದು ತಿಳಿಸಿದ್ದಾರೆ..
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಣೇಹಳ್ಳಿ ತರಳಬಾಳು ಮಠದಲ್ಲಿ ಬಸವಾದಿ ಶರಣರ ವಚನಗಳ ರಾಜ್ಯ ಮಟ್ಟದ ಸ್ಪರ್ಧೆ.
ವಾಣಿ ವಿಲಾಸ ಸಾಗರ ಜಲಾಶಯವು ಚಿತ್ರದುರ್ಗ ಜಿಲ್ಲೆಯ ಕುಡಿಯುವ ನೀರಿನ ಸೌಲಭ್ಯದ ಜೀವನಾಡಿಯಾಗಿದೆ. ಚಿತ್ರದುರ್ಗ, ಹಿರಿಯೂರು ಸೇರಿದಂತೆ ಹಲವು ನಗರ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಗೆ ವಿವಿ ಸಾಗರ ಜಲಾಶಯವು ಆಶ್ರಯವಾಗಿದೆ. ಹಿರಿಯೂರು ಹೊಸದುರ್ಗ, ಚಳ್ಳಕೆರೆ ತಾಲೂಕಿನ ಹಲವು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ, ಕೃಷಿಗೆ ನೀರುಣಿಸುವ ಮೂಲಾಧಾರವಾಗಿದೆ. ಬರದ ನಾಡು, ಬಯಲು ನಾಡು ಎಂದೇ ಹೆಸರಾಗಿರುವ ಚಿತ್ರದುರ್ಗದ ಏಕಮಾತ್ರ ನೀರಿನ ಆಧಾರವಾಗಿರುವ 118 ವರ್ಷದ ಹಳೆಯ ವಿವಿ ಜಲಾಶಯ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಹಲವು ಗ್ರಾಮಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 130ಅಡಿ ಎತ್ತರದ, 30.44 ಟಿಎಂಸಿ ನೀರು ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 127 ಅಡಿಗಳಷ್ಟು ನೀರು ಸಂಗ್ರಹವಾಗಿದೆ.