ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಮರಹಳ್ಳಿ ಗ್ರಾಮದ ಮಾದಿಗರ ಹಟ್ಟಿಗೆ ಹೋಗುವ ರಸ್ತೆಯಲ್ಲಿ ಚರಂಡಿ ನಿರ್ಮಾಣವಾಗದೆ ಇರುವುದರಿಂದ ರಸ್ತೆಯೇ ಚರಂಡಿಯಂತೆ ಪರಿವರ್ತನೆಗೊಂಡಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಪಕ್ಕದಲ್ಲಿ ಶಾಲೆ ಇರುವುದರಿಂದ ಮಕ್ಕಳು ಕೊಳಚೆ ನೀರಿನಲ್ಲಿ ನಡೆದುಕೊಂಡು ಓಡಾಡುತ್ತಿರುವುದು ಕಳವಳ ಹುಟ್ಟಿಸಿದೆ ಈಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಿ. ರಾಜ್ಯ ಸಮಿತಿ ಹಾಗೂ ಎಐಬಿಎಸ್‌ಪಿ ನಾಯಕರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಸಾರ್ವಜನಿಕರು, ವೃದ್ಧರು ಹಾಗೂ ಮಕ್ಕಳು ತೀವ್ರ ಅನಾನುಕೂಲಕ್ಕೆ ಒಳಗಾಗುತ್ತಿದ್ದಾರೆ. ಮಾಲಿನ್ಯಗೊಂಡ ಚರಂಡಿ ನೀರು ಊರಿನೊಳಗೆ ನಿಂತು ಕೆಟ್ಟ ಪರಿಣಾಮ ಬೀರುತ್ತಿದೆ. ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷದ ಮುಖಂಡರು ಆಶ್ವಾಸನೆ ನೀಡಿದರೂ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಇಚ್ಛಾಶಕ್ತಿ ಹಾಗೂ ಹೊಂದಾಣಿಕೆಯ ಕೊರತೆಯಿಂದಾಗಿದೆ ಎಂದು ಆರೋಪಿಸಲಾಗಿದೆ.
ಮಾದಿಗರ ಹಟ್ಟಿ ಊರಿನ ಕೇಂದ್ರಬಿಂದುವಿನ ನಡುವೆ ಇರುವುದರಿಂದ ಸಮುದಾಯವು ಅಸಹನೆ ಹಾಗೂ ಕಡೆಗಣನೆಗೆ ಗುರಿಯಾಗಿದೆ ಎಂದು ಸಮಿತಿಯವರು ಅಭಿಪ್ರಾಯಪಟ್ಟಿದ್ದಾರೆ. ಸೌಚ ಸೌಕರ್ಯದ ವಿಷಯದಲ್ಲೂ ಸ್ಥಿತಿ ಕಳಪೆಯಾಗಿದ್ದು, ಬೆರಳೆಣಿಕೆಯಷ್ಟು ಶೌಚಾಲಯಗಳು ಮಾತ್ರ ಇರುವುದರಿಂದ ಹೆಂಗಸರು, ಮಕ್ಕಳು ಹಾಗೂ ವೃದ್ಧರು ಊರಿನಿಂದ ಹೊರಗೆ ತೆರಳಬೇಕಾದ ಪರಿಸ್ಥಿತಿ ಇದೆ” ಎಂದು ಪತ್ರಕರ್ತ ರವಿಶಂಕರ್ ತಿಳಿಸಿದ್ದಾರೆ.
ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಿ. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆರ್. ಹಾಗೂ ಎಐಬಿಎಸ್‌ಪಿ ಹಿರಿಯೂರು ತಾಲೂಕು ಸಂಯೋಜಕ ನರಸಿಂಹಮೂರ್ತಿ ಅವರು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಗೆ ಕೂಡಲೇ ಚರಂಡಿ ನಿರ್ಮಿಸಿ ಅನುಕೂಲ ಮಾಡಬೇಕೆಂದು ಒತ್ತಾಯಿಸಿದ್ದಾರೆ.





