ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹೇಯ ಕ್ರತ್ಯ ಖಂಡಿಸಿ ಸಿಪಿಎಂ ಇಂದು ಕುಂದಾಪುರದ ಬೆವರು ಕಚೇರಿಯಲ್ಲಿ ಖಂಡನಾ ಸಭೆ ನಡೆಸಿತು ಹಾಗೂ ಅಗಲಿದ ಮುಗ್ಧ ಜೀವಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಈ ಕ್ರತ್ಯವು ಅಪಾರ ನೋವು ದು:ಖ ತಂದಿದೆ. ಈ ದಾಳಿಯು ಮಾನವೀಯತೆ ಮೇಲಿನ ದಾಳಿಯಾಗಿದ್ದು ಧಾರ್ಮಿಕ ಅಥವಾ ಕೋಮು ಆಧಾರದ ಮೇಲೆ ನಮ್ಮನ್ನು ವಿಭಜಿಸಲು ಸಾಧ್ಯವಿಲ್ಲ ಎಂಬುವುದನ್ನು ಉಗ್ರರು ಹಾಗೂ ಮತೀಯವಾದಿಗಳು ತಿಳಿಯಬೇಕು ಎಂದರು.
ಭಯೋತ್ಪಾದಕರ ವಿಭಜಕ ಮತ್ತು ಮೋಸಗೊಳಿಸುವ ಕಾರ್ಯಸೂಚಿಗೆ ಬಲಿಯಾಗಬಾರದು ದೇಶದ ಐಕ್ಯತೆ ಒಡೆಯಲು ಸಮಗ್ರತೆ ದುರ್ಬಲಗೊಳಿಸುವ ಪ್ರಯತ್ನಕ್ಕೆ ಎಲ್ಲರೂ ಪಕ್ಷ ಬೇಧ ಮರೆತು ಸೋಲಿಸಬೇಕು ಎಂದು ಹೇಳಿದರು.
ಪ್ರವಾಸಿಗರನ್ನು ರಕ್ಷಿಸಲು ಕಾಶ್ಮೀರಿ ಮುಸ್ಲಿಮರು ತಮ್ಮ ಪ್ರಾಣವನ್ನೇ ನೀಡಿದ್ದಾರೆ ಘಟನೆ ನಂತರ ಗಾಯಾಳುಗಳಿಗೆ ರಕ್ತ ದಾನ ಮತ್ತು ಇತರೆ ಸಹಾಯ ಗಳನ್ನು ಮಾಡಿರುವುದಲ್ಲದೇ ಮೌನಾಚರಣೆ, ಶ್ರದ್ಧಾಂಜಲಿ ಸಭೆ ಪ್ರತಿಭಟನೆ,ಬಂದ್ ಮಾಡಿಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಜನರು ಒಂದೇ ಧ್ವನಿಯಲ್ಲಿ ಖಂಡಿಸಿದ್ದಾರೆ ಇದು ನಿಜವಾದ ಭಾರತ ಎಂಬುವುದು ನಮ್ಮೆಲ್ಲರ ಹೆಮ್ಮೆ ಆಗಿದೆ. ಅಗಲಿದ ಜೀವಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಪಕ್ಷವು ಸಲ್ಲಿಸುತ್ತದೆ ಕುಟುಂಬ ದವರಿಗೆ ಸಾಂತ್ವನ ಹೇಳುತ್ತದೆ.
ಕೇಂದ್ರ ಸರಕಾರವು ಅಪರಾಧಿಗಳನ್ನು ವಿಳಂಬವಿಲ್ಲದೆ ಗುರುತಿಸಿ ನ್ಯಾಯ ವ್ಯವಸ್ಥೆಯಲ್ಲಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಜಮ್ಮು ಕಾಶ್ಮೀರದ ಪೋಲಿಸ್ ರಕ್ಷಣಾ ವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಭದ್ರತಾ ವ್ಯವಸ್ಥೆಯನ್ನು ಮರು ಪರಿಶೀಲಿಸಬೇಕು ಇಂತಹ ಅಮಾನವೀಯ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಎಲ್ಲರೂ ಎದ್ದು ನಿಂತು ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ,ಪಕ್ಷದ ತಾಲೂಕು ಸಮಿತಿ ಸದಸ್ಯರಾದ ಸಂತೋಷ್ ಹೆಮ್ಮಾಡಿ, ಚಿಕ್ಕ ಮೊಗವೀರ, ಅಣ್ಣಪ್ಪ ಅಬ್ಬಿಗುಡ್ಡಿ, ರಹೇಮಾನ್, ಅನಂತ ಕುಲಾಲ್ ಸುಧೀರ್, ಕ್ರಷ್ಣ ಪೂಜಾರಿ, ಮೊದಲಾದವರಿದ್ದರು.