ಡಿಬಿಟಿ ಪ್ರಕ್ರಿಯೆಯಲ್ಲಿ ನಾಲ್ಕು ತಿಂಗಳ ಬಾಕಿಯಾಗಿರುವ ಕಟ್ಟಡ ಕಾರ್ಮಿಕರ ಪಿಂಚಣಿ ಒಂದೇ ಕಂತಿನಲ್ಲಿ ಜಮೆ ಮಾಡಲು ಹಾಗೂ ಇತರ ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇಂದು ಕುಂದಾಪುರ ತಹಶೀಲ್ದಾರರ ಕಚೇರಿ ಎದುರು ಹಿರಿಯ ಪಿಂಚಣಿದಾರರು ಧರಣಿ ನಡೆಸಿದರು.
ಧರಣಿಯನ್ನುದ್ದೇಶಿಸಿ ಪಿಂಚಣಿದಾರರ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ ಮಾತನಾಡಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ನಾಲ್ಕು ತಿಂಗಳಿಂದ ಪಿಂಚಣಿ ತಡೆಹಿಡಿದು ಡಿಬಿಟಿ ಪ್ರಕ್ರಿಯೆ ಮಾಡುತ್ತಿರುವುದರಿಂದ ಆರ್ಥಿಕವಾಗಿ ಹಿಂದುಳಿದ ಬಹುತೇಕ ಪಿಂಚಣಿ ದಾರರು ಸಂಕಷ್ಟಕ್ಕೀಡಾಗಿದ್ದಾರೆ ಆದುದರಿಂದ ಮಂಡಳಿ ಕೂಡಲೇ ನಾಲ್ಕು ತಿಂಗಳ ಪಿಂಚಣಿ ಒಂದೇ ಕಂತಿನಲ್ಲಿ ಪಿಂಚಣಿ ದಾರರಿಗೆ ಹಣ ಜಮೆ ಮಾಡಬೇಕು ಅಲ್ಲದೇ ಪಿಂಚಣಿ ರೂ 9000/- ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ಮತ್ತೊಂದು ಪಿಂಚಣಿ ಪಡೆಯುತ್ತಿಲ್ಲ ಎಂದು ಸಾಬೀತು ಪಡಿಸಲು ನಾಡ ಕಚೇರಿ, ತಾಲೂಕು ಕಚೇರಿ ಸೈಬರ್ ಗಳಿಗೆ ಅಲೆದಾಡುವಂತೆ ಮಾಡಲಾಗುತ್ತಿದೆ.
ಇದನ್ನು ಸರಳೀಕರಿಸಲು ತಾಲೂಕು ಆಡಳಿತ ಮುಂದಾಗಬೇಕು. ಬಹಳಷ್ಟು ಪಿಂಚಣಿದಾರರೂ ಅನಾರೋಗ್ಯ ಪೀಡಿತರಾಗಿದ್ದಾರೆ.ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಔಷಧಿಗಳಿಗೆ ವೆಚ್ಚ ಮಾಡಬೇಕಾದ ಪರಿಸ್ಥಿತಿ ಇದೆ ಇಂತಹ ಪರಿಸ್ಥಿತಿಯಲ್ಲಿ ಮಂಡಳಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿ ಕೆಲಸ ಚುರುಕುಗೊಳಿಸಿ ಬಾಕಿ ಇರುವ ಪಿಂಚಣಿ ಜಮೆ ಮಾಡಬೇಕು ವಿಧವ ವೇತನ, ವ್ರದ್ದಾಪ್ಯ ವೇತನ ಪಡೆಯುತ್ತಿರುವವರಿಗೂ ಕಟ್ಟಡ ಕಾರ್ಮಿಕರ ಪಿಂಚಣಿ ಪಡೆಯಲು ಅವಕಾಶ ಇರಬೇಕು ಎಂದು ಹೇಳಿದರು.
ಧರಣಿಯನ್ನುದ್ದೇಶಿಸಿ ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ ಮಾತನಾಡಿದರು. ಪಿಂಚಣಿದಾರರ ಸಂಘದ ಕಾರ್ಯದರ್ಶಿ ಕ್ರಷ್ಣ ಪೂಜಾರಿ ಸ್ವಾಗತಿಸಿದರು.ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ( ರಿ) ಕಾರ್ಯದರ್ಶಿ ವಿಜೇಂದ್ರ ಕೋಣಿ ವಂದಿಸಿದರು.
ಪ್ರತಿಭಟನಾಕಾರರು ಬೇಡಿಕೆಗಳು
1.ಆಧಾರ್ ಕಾರ್ಡ್ ಚಾಲ್ತಿಗೆ ಬಾರದ ಸಮಯದಲ್ಲಿ ಕಟ್ಟಡ ಕಾರ್ಮಿಕರ ಗುರುತು ಚೀಟಿ ಪಡೆದ ಪಿಂಚಣಿದಾರರಿಗೆ ಅವರ ಆಧಾರ್ ಕಾರ್ಡ್ ನಲ್ಲಿ ವಯಸ್ಸು ವ್ಯತ್ಯಾಸ ಇದ್ದು ತಿರಸ್ಕರಿಸಿದ ಕಾರ್ಮಿಕರಿಗೆ ಪಿಂಚಣಿ ಕೂಡಲೇ ನೀಡಬೇಕು.ಆಧಾರ್ ಕಾರ್ಡ್ ವಯಸ್ಸಿನ ಮಾನದಂಡ ಆಗಬಾರದು. ಇಂತವರಿಗೆ ಮಂಡಳಿ ಚಾಲ್ತಿಗೆ ತಂದ ತಂತ್ರಾಂಶದಲ್ಲಿ ಸರಕಾರಿ ದಾಖಲೆ ಇದ್ದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಎಂಬ ಷರತ್ತು ತೆಗೆಯಬೇಕು.ಈ ವಿಷಯವಾಗಿ 2019-20 ರಲ್ಲಿ ಮಂಡಳಿ ಹೊರಡಿಸಿದ ಸುತ್ತೋಲೆ ಯಲ್ಲಿ ಕಟ್ಟಡ ಕಾರ್ಮಿಕರು ಮಂಡಳಿಯ ಫಲಾನುಭವಿಗಳಾಗಿ ನೋಂದಣಿ ಆಗುವ ಸಮಯದಲ್ಲಿ ಸಲ್ಲಿಸಿರುವ ವಯಸ್ಸಿನ ದಾಖಲೆಯನ್ನು ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ವಯಸ್ಸಿನ ದಾಖಲೆಯಾಗಿ ಪರಿಗಣಿಸಲಾಗುತ್ತದೆ (ಸುತ್ತೋಲೆ ಸಂಖ್ಯೆ: ಸಿ ಡಬ್ಲ್ಯೂ ಬಿ/ಸಿ ಆರ್ -58/2019-29/5129) ಸದರಿ ಸುತ್ತೋಲೆಯಂತೆ ಪಾಲನೆ ಮಾಡಬೇಕೆಂದು ಮರು ಸುತ್ತೋಲೆ ಹೊರಡಿಸಬೇಕು.
2 ಕಳೆದ 4 ತಿಂಗಳಿನಿಂದ ಬಾಕಿ ಇರುವ ಪಿಂಚಣಿ ಕೂಡಲೇ ಒಂದೇ ಕಂತಿನಲ್ಲಿ ಜಮೆ ಮಾಡಬೇಕು ಅದರ ನಂತರ ಡಿಬಿಟಿ ಪ್ರಕ್ರಿಯೆ ಮುಂದುವರಿಸಬೇಕು.
3.ಹೊಸದಾಗಿ ಅರ್ಜಿ ಸಲ್ಲಿಸಿದ ಕೆಲವು ಕಟ್ಟಡ ಕಾರ್ಮಿಕರಿಗೆ ಮಂಜೂರಾತಿ ನೀಡಿ 2-3 ತಿಂಗಳು ಕಳೆದರೂ ಹಣ ಖಾತೆಗೆ ಜಮಾ ಮಾಡಿಲ್ಲ ಮಂಜೂರಾತಿ ತಿಂಗಳಿಂದ ಖಾತೆಗೆ ಜಮೆ ಮಾಡಬೇಕು.
4.ಕುಟುಂಬ ಪಿಂಚಣಿ ಅರ್ಜಿಯನ್ನು ತಂತ್ರಾಂಶದಲ್ಲಿ ಸಲ್ಲಿಸಲು ಅವಕಾಶ ನೀಡಬೇಕು.
5.ಪಿಂಚಣಿ ಪಡೆಯುತ್ತಿರುವ ವಯೊವ್ರದ್ದರಿಗೆ ಕಲ್ಯಾಣ ಮಂಡಳಿ ವೈದ್ಯಕೀಯ ಸೌಲಭ್ಯಗಳನ್ನು, ಮಕ್ಕಳು ಕಲಿಯುತ್ತಿದ್ದರೆ ಶೈಕ್ಷಣಿಕ ಧನಸಹಾಯ, ಮಕ್ಕಳಿಗೆ ವೈವಾಹಿಕ ಧನಸಹಾಯ ನೀಡಬೇಕು.
6.ತಂತ್ರಾಂಶದಲ್ಲಿ DATA NOT FOUND, NAME IS MISMATCH, ಹಳೆ ಪಿಂಚಣಿದಾರರಿಗೆ ಈಗ ಆಧಾರ್ ಕಾರ್ಡ್ ನಲ್ಲಿ 60 ವಯಸ್ಸು ತುಂಬಿಲ್ಲ ಎಂದು ಬರುತ್ತಿರುವ note ಗಳಿಗೆ ವಿಳಂಭ ಮಾಡದೇ ಪರಿಹರಿಸಬೇಕು.
7.ಕಾರ್ಮಿಕರು 60 ವರ್ಷಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಕೈಬಿಟ್ಟು 60 ಮೇಲಿನ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು.
8.ಕಲ್ಯಾಣ ಮಂಡಳಿ, ಕಾರ್ಮಿಕರ ಇಲಾಖೆಗಳು ಭ್ರಷ್ಟಾಚಾರ ರಹಿತ, ಕಿರುಕುಳ,ಷರತ್ತುಗಳಿಂದ ಮುಕ್ತಗೊಳಿಸಿ ಪಿಂಚಣಿದಾರ ಹಿರಿಯ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು.
9.ಕಲ್ಯಾಣ ಮಂಡಳಿಯಿಂದ ನೀಡುವ ಪಿಂಚಣಿಯ ಜತೆಗೆ ಕಂದಾಯ ಇಲಾಖೆ ನೀಡುವ ವ್ರದಾಪ್ಯ ವೇತನ,ವಿಧವ ವೇತನ ಪಡೆಯಲು ಅವಕಾಶ ಕಲ್ಪಿಸಬೇಕು ಒಂದೇ ಪಿಂಚಣಿ ಎಂಬ ನೀತಿ ಕೈಬಿಡಬೇಕು.ಬೇರೆ ಪಿಂಚಣಿ ಪಡೆಯುತ್ತಿಲ್ಲ ಎಂಬ ಪ್ರಮಾಣ ಪತ್ರ ಕೊಡುವುದು ರದ್ದು ಪಡಿಸಬೇಕು.
10.ಅಫಘಾತಕ್ಕೀಡಾಗಿ ಮರಣ ಹಾಗೂ ಇತರೇ ಸಂಬಂಧಿಸಿದಂತೆ ಅಕಾಲಿಕ ಮರಣಕ್ಕೆ ತುತ್ತಾದ ಕಾರ್ಮಿಕರ ಕುಟುಂಬದ ಹೆಂಡತಿ ಅಥವ ಗಂಡ ನೋಂದಾಯಿತ ಕಾರ್ಮಿಕರಾದಲ್ಲಿ ಅವರಲ್ಲಿ ವಿದ್ಯಾಬ್ಯಾಸ ಮಾಡುವ ಮಕ್ಕಳಿದ್ದಲ್ಲಿ ಅವರಿಗೆ ಅಪಘಾತ ಪರಿಹಾರ, ಕುಟುಂಬ ಪಿಂಚಣಿ ಜೊತೆ ಶೈಕ್ಷಣಿಕ ಧನಸಹಾಯ ನೀಡಲು ಕ್ರಮವಹಿಸಬೇಕು.
11.ಕಲ್ಯಾಣ ಮಂಡಳಿಯಲ್ಲಿ,ವಿವಿಧ ಹಂತದ ಕಾರ್ಮಿಕರ ಇಲಾಖೆಗಳಲ್ಲಿ ಕೆಲಸ ಮಾಡಲು ಹೆಚ್ಚವರಿ ಸಿಬ್ಬಂದಿಗಳನ್ನು ನೇಮಕ ಮಾಡಿ ಈಗಿರುವ ಗುತ್ತಿಗೆ ಆಧಾರಿತ ಸಿಬ್ಬಂದಿಗಳನ್ನು ಕಾಯಂಗೊಳಿಸಬೇಕು ಕಾರ್ಮಿಕರ ಕೆಲಸಗಳು ಶೀಘ್ರ ಆಗಲು ಕ್ರಮವಹಿಸಬೇಕು.
12.ನೂತನ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ವಾಪಾಸ್ಸು ಪಡೆಯಬೇಕು.1996 ಕಟ್ಟಡ ಕಾರ್ಮಿಕರ ಕಾನೂನು 1996 ಸೆಸ್ ಕಾನೂನು ರಕ್ಷಣೆ ಆಗಬೇಕು.
ಬೇಡಿಕಗಳ ಮನವಿಯನ್ನು ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಹಾಗೂ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತಿ ಅವರಿಗೆ ಸಲ್ಲಿಸಲಾಯಿತು.
