ಇತ್ತೀಚೆಗೆ ದಲಿತ ಮಕ್ಕಳಿಂದ ಮಲದ ಗುಂಡಿಯನ್ನು ಸ್ವಚ್ಛತೆ ಮಾಡಿಸಿರುವ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಕರಣವು ಜಾತಿಪದ್ಧತಿಯ ಕ್ರೌರ್ಯವನ್ನು ಮತ್ತೆ ಮತ್ತೆ ನೆನಪು ಮಾಡುತ್ತದೆ.
ಜನಸಾಮಾನ್ಯರು ಈ ಜಾತಿಪದ್ಧತಿಯ ಕಬಂಧಬಾಹುವಿನಿಂದ ಹೊರಬರಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ವಿಶ್ವ ಬಹು ಸಂಸ್ಕೃತಿ ಹೊಂದಿರುವ ಅತೀ ದೊಡ್ಡ ದೇಶ ಭಾರತ. ಜಾತಿಯ ಸೋಂಕಿನ ಗಾಳಿಯನ್ನು ಕುಡಿದು ಬದುಕುತ್ತಿರುವ ಹಿಂದೂಗಳಿಗೆ ಜಾತಿಯ ಜಾಡ್ಯ ಹಿಡಿದಿದೆ. ಇವರ ಒಡನಾಟದಿಂದ ಸಿಖ್ಖರು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೂ ಸೋಂಕು ತಾಕಿದೆ.
ಧರ್ಮ ಮತ್ತು ಸಮಾಜಗಳೆರಡು ಜಾತಿಯ ಸಂಘರ್ಷಕ್ಕೆ ತುತ್ತಾಗಿವೆ. ಈ ಜಾತಿ ಶ್ರೇಷ್ಠ, ಆ ಜಾತಿ ಕನಿಷ್ಠ, ಈ ವೃತ್ತಿ ಶ್ರೇಷ್ಠ, ಆ ವೃತ್ತಿ ಕನಿಷ್ಠ ಎಂದು ನೋಡುವ ಸಾಂಪ್ರದಾಯಿಕ, ಸಂಕುಚಿತ ದೃಷ್ಟಿಕೋನ ನಮ್ಮಿಂದ ದೂರ ಮಾಡಿಕೊಳ್ಳಬೇಕು. ವ್ಯಕ್ತಿಯ ನಡವಳಿಕೆಗೂ ಜಾತಿಗೂ ಸಂಬಂಧವಿಲ್ಲ. ಎಲ್ಲ ಜಾತಿಗಳಲ್ಲಿಯೂ ಶ್ರೇಷ್ಠರೂ ಇದ್ದಾರೆ, ಕನಿಷ್ಠರೂ ಇದ್ದಾರೆ.
ಹಾಗಾಗಿ ಯಾವ ಜಾತಿಯೂ ಕೀಳಲ್ಲ, ಯಾವ ಜಾತಿಯೂ ಮೇಲಲ್ಲ ಎಂಬ ಅಭಿಪ್ರಾಯವನ್ನು ನಾವು ಹೊಂದಬೇಕಾಗಿದೆ. ಸಿಕ್ಕರೆ ಎಲ್ಲರಿಗೂ ಸಮಾನ, ಗೌರವಗಳು ಸಿಗಬೇಕು ಇಲ್ಲದಿದ್ದರೆ ಲೋಪಗಳನ್ನು ತಿದ್ದಿಕೊಳ್ಳಲು ಎಲ್ಲರೂ ಸಮಾನವಾಗಿ ಕೈಜೋಡಿಸಬೇಕು. ಅದಕ್ಕಾಗಿಯೇ ‘ಕಳ್ಳನೂ ಒಳ್ಳಿದನೂ ಎಲ್ಲ ಜಾತಿಯೊಳಿಹರುʼ ಎಂದು ಸರ್ವಜ್ಞ ಹೇಳಿದ್ದ ಸಂಗತಿಯನ್ನು ಇಲ್ಲಿ ನೆನಪು ಮಾಡಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸರ್ವರೂ ಕೈಜೋಡಿಸುವ ಸಂದರ್ಭವನ್ನು ಇಂದೇ ಸೃಷ್ಟಿಸಿಕೊಳ್ಳೋಣ ಎಂದು ಡಾ. ಸಿದ್ದಯ್ಯ ರೆಡ್ಡಿಹಳ್ಳಿ ಕರೆ ನೀಡಿದರು.
ಗುಲಾಮಗಿರಿ ಅತ್ಯಂತ ಹಳೆಯ ಮತ್ತು ನಿಷೇಧವಾಗಿದ್ದರೂ ಅಸ್ತಿತ್ವದಲ್ಲಿರುವ ಪದ್ಧತಿ. ಕುಟುಂಬದ ಹಿರಿಯರು ಮಾಡಿದ ಸಾಲವನ್ನು ತೀರಿಸುವ ಸಲುವಾಗಿ ಸಂಬಳವಿಲ್ಲದೇ ದುಡಿಮೆ ಮಾಡುವುದು. ಮನೆಗೆಲಸ, ಹೊಲ-ಗದ್ದೆ, ಕಲ್ಲು ಗಣಿಗಾರಿಕೆ, ಮೀನುಗಾರಿಕೆ ಮತ್ತು ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಇಂತಹ ಜೀತದಾಳುಗಳನ್ನು ಕಾಣಬಹುದು. ಯಾವುದೇ ವ್ಯಕ್ತಿಯ ಕೆಲಸದ ಆಯ್ಕೆ, ಊಟ ಮತ್ತು ಜೀವನ ಶೈಲಿಯ ಸ್ವಾತಂತ್ರ್ಯವನ್ನು ಮತ್ತೊಬ್ಬ ವ್ಯಕ್ತಿ ಹಣ, ಅಧಿಕಾರ, ಬಲ ಮತ್ತು ಹಿಂಸೆಯನ್ನು ಬಳಸಿ ಕಸಿದುಕೊಳ್ಳುವುದು ಆಧುನಿಕ ಗುಲಾಮಗಿರಿ ಎಂದು ವಿಶ್ವಸಂಸ್ಥೆ ಹೇಳಿದೆ.
ಹಾಗಾಗಿ ಅವರು ದ್ರವ್ಯಗಳು, ಸಂಪತ್ತನ್ನು ಕೂಡಿ ಹಾಕುವುದಕ್ಕೆ ಜನ ಸಮುದಾಯವನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಈ ಗುಲಾಮಗಿರಿಯು ಕೊನೆಯಲ್ಲಿ ಯಾತನೆ, ದುಃಖ ಮತ್ತು ಬಡತನಗಳ ನಿರ್ಮಿತಿಗೆ ಕಾರಣೀಭೂತವಾಗುತ್ತದೆ. ಆದರೆ, ಇಲ್ಲಿ ಬಂಡವಾಳಶಾಹಿಗಿಂತ ಕ್ರೂರವಾಗಿ ಜಾತಿಪದ್ಧತಿ ನಮ್ಮನ್ನು ಕಾಡುತ್ತಿರುವುದನ್ನು ಕಾಣಬಹುದು ಎಂದರು.
ಕೈಗಾರಿಕಾ ಕ್ರಾಂತಿಯು ಭಾರತದ ಕಡಲತೀರವನ್ನು ತಲುಪಿದಾಗ ಜಾತಿ ಪದ್ಧತಿಯ ವಿನಾಶ ಖಚಿತವಾಯಿತು. ಯಂತ್ರಗಳು ವ್ಯಕ್ತಿಗಳನ್ನು ಗೌರವಿಸಲಿಲ್ಲ. ಬಹುತೇಕ ಕಾರ್ಖಾನೆಗಳಲ್ಲಿ ಕಾರ್ಮಿಕರು ಜಾತಿಯ ಯಾವ ವಿಧವಾದ ತಾರತಮ್ಯಗಳನ್ನು ಕಾಣದೆ ಪಕ್ಕಪಕ್ಕದಲ್ಲೆ ಕೆಲಸ ಮಾಡುತ್ತಿದ್ದರು. ಇದು ನಮ್ಮ ಪ್ರಾಚ್ಯ ಪರಂಪರೆಯಲ್ಲಿ ನಾಗರಿಕತೆಯ ರೋಚಕ ಕಥೆಯಾಗಿದೆ.
ವಿಶ್ವದಲ್ಲಿ 60,000 ಜಾತಿಗಳು, 2,000 ಭಾಷೆಗಳು, 33,000 ಕೋಟಿ ದೇವತೆಗಳಿವೆ ಎಂದು ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಡುತ್ತಾರೆ. ಜಾತಿಯ ಕಾನೂನಿನಂತೆ ಅಸ್ಪøಶ್ಯರು ಶೂದ್ರರಿಂದ 24 ಅಡಿ ದೂರದಲ್ಲಿ ಇರಬೇಕು, ಇಲ್ಲವೆ ಬ್ರಾಹ್ಮಣರಿಂದ 74 ಅಡಿ ದೂರದಲ್ಲಿರಬೇಕು. ಎಂಬ ಸಂಗತಿಯನ್ನು ನಾಗರಿಕತೆಯ ಕಥೆಯನ್ನು ದಾಖಲಿಸುವಾಗ ವಿಲ್ ಡ್ಯೂರಾಂಟ್‍ರವರು ಹೇಳಿದ್ದಾರೆ. 1913ರಲ್ಲಿ ಕೋಹತ್‍ನ ಶ್ರೀಮಂತ ಹಿಂದೂವೊಬ್ಬನ ಮಗುವೊಂದು ಕೆರೆಯಲ್ಲಿ ಬಿದ್ದು ಮುಳುಗಿತು. ಮಗುವಿನ ತಾಯಿ ಮತ್ತು ಆ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಅಸ್ಪೃಶ್ಯವಿನಾ ಅಲ್ಲಿ ಬೇರೆ ಯಾರೂ ಇರಲಿಲ್ಲ.
ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಿಸುವುದು ಕಡಿಮೆಯಾಗಿರುವುದರಿಂದಲೇ ಪೊಲೀಸ್ ಸ್ಟೇಷನ್‍ಗಳಲ್ಲಿ ಶಿಕ್ಷಿಸುವುದು ಹೆಚ್ಚಾಗಿದೆ ಎಂದು ಕೆಲವು ಪೋಷಕರು ವಾದಿಸುತ್ತಿರುವುದನ್ನು ಕೇಳಿರಬಹುದು. ಆದರೆ, ಈ ಮಲ ತೊಳೆಯುವ ಘಟನೆಯು ಹೀಗೆ ವಾದ ಮಾಡುವವರನ್ನು ಮೌನಗೊಳಿಸುತ್ತದೆ. ಶಾಲೆಗಳು ಈ ರೀತಿಯ ನೀಚ ಶಿಕ್ಷಾ ಕೇಂದ್ರಗಳಾದರೆ, ಅವೇ ಜೈಲುಗಳಾಗಿ ಅಲ್ಲಿಯೇ ಅಪರಾಧಿಗಳು ಹುಟ್ಟಿಬರುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವೂ ಉಳಿದಿಲ್ಲ. ನಡೆವುದೊಂದೆ ಭೂಮಿ ಕುಡಿವುದೊಂದೆ ಜಲವು ಸುಡುವಗ್ನಿ ಒಂದೇ ಇರುತಿರಲು ಈ ನಡುವೆ ಕುಲಭೇದ ಇರಬಾರದು ಎಂಬ ಸರ್ವಜ್ಞನ ಮಾತನ್ನು ನೆನಪು ಮಾಡಿಕೊಂಡು ಜಾತಿಯ ವೈರಸ್‍ನಿಂದ ಮಕ್ಕಳನ್ನು ರಕ್ಷಿಸಬೇಕಾಗಿದೆ.
ಪ್ರಸ್ತುತ ಘಟನೆಯಿಂದ ಸಮಾಜವು ಎಚ್ಚರಗೊಳ್ಳಬೇಕಾಗಿದೆ. ವಾಸ್ತವವಾಗಿ ಮಲದ ಗುಂಡಿಯೆನೋ ಮಲೀನಗೊಂಡಿರುತ್ತದೆ, ಆದರೆ ಇಲ್ಲಿ ಶಿಕ್ಷಕರ ಹೃದಯವು ಕೂಡ ಮಲೀನಗೊಂಡಿರುವುದು ಶೋಚನೀಯವಾದ ಸಂಗತಿಯಾಗಿದೆ. ಮಕ್ಕಳನ್ನು ಜೀತಕ್ಕೆ ಕಳುಹಿಸಬಾರದು ಅವರು ನಮ್ಮಂತಾಗದೇ ನಾಲ್ಕು ಅಕ್ಷರ ಕಲಿತು ಮೇಲೆ ಬರಲಿ ಎಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಇಲ್ಲಿ ಶಿಕ್ಷಕರೇ ಮಕ್ಕಳನ್ನು ಜೀತಕ್ಕಿಳಿಸಿದ್ದಾರೆ. ಆದರೆ ಇಲ್ಲಿನ ದುರಂತವೇನೆಂದರೆ ಇಲ್ಲಿ ಜೀತಕ್ಕಿಟ್ಟಿರುವುದು ಅವರಿಗೇ ತಿಳಿದೇ ಇಲ್ಲ. ಅವರ ಮಕ್ಕಳಿಗೆ ಶಿಕ್ಷಕರೇ ದೇವರು ಅವರು ಹೇಳಿದಂತೆ ಕೇಳಿ ಎಂದು ತಮ್ಮ ಮಕ್ಕಳಿಗೆ ಹೇಳಿ ಕಳುಹಿಸಿದ್ದಾರೆ.
ಆದರೆ, ಆ ಮಕ್ಕಳಿಗೆ ದೇವರೇ ದೆವ್ವವಾಗಿ ಕಾಡುತ್ತಿವೆ. ಇಲ್ಲಿ ನೀಚಕೆಲಸವನ್ನು ಮಾಡಿ, ಮುಂದೆ ಮಕ್ಕಳ ದುಡ್ಡಿನಲ್ಲಿಯೇ ದೇವಾಲಯವನ್ನು ಕಟ್ಟಿರುವುದು ವ್ಯವಸ್ಥೆಯನ್ನು ವ್ಯಂಗ್ಯ ಮಾಡುತ್ತಿರುವಂತೆ ತೋರುತ್ತಿದೆ. ಭಾರತಮ್ಮ ಎಂದು ಹೆಸರಿಟ್ಟುಕೊಂಡ ಪ್ರಾಂಶುಪಾಲೆ ಇಡೀ ಭಾರತದ ಜಾತಿ ವ್ಯವಸ್ಥೆಯ ಪ್ರತಿನಿಧಿಯಂತೆ ಕಂಡುಬರುತ್ತಿದ್ದಾರೆ. ಭಾರತೀಯ ಮಹಿಳೆಯಷ್ಟು ಶೋಷಣೆಗೊಳಗಾದ ಸ್ತ್ರೀ ಇನ್ನಾವ ದೇಶದಲ್ಲೂ ಇಲ್ಲ ಎಂಬುದು ಎಷ್ಟು ನಿಜವೋ ಅಷ್ಟೇ ವಿಕೃತವಾಗಿ ಪರಿಶಿಷ್ಟ ಮಕ್ಕಳ ಮೇಲೆ ಒಬ್ಬ ಮಹಿಳೆಯಾಗಿ ದೌರ್ಜನ್ಯ ನಡೆಸಿರುವುದು ಖಂಡನೀಯ. ಸ್ತ್ರೀವಾದ ಮಾನವ ಜೀವಿಗಳಂತೆ ಮಹಿಳೆಯರನ್ನು ಮೌಲ್ಯಮಾಪನ ಮಾಡಬೇಕೆಂದು ಒತ್ತಾಯಿಸುತ್ತದೆ. ಆದರೆ ಇಲ್ಲಿ ಒಬ್ಬ ಮಹಿಳೆ ಪರಿಶಿಷ್ಟ ಮಕ್ಕಳನ್ನು ಮನುಷ್ಯರನ್ನಾಗಿ ಕಾಣದಿರುವುದು ವಿಪರ್ಯಾಸವೆನಿಸುತ್ತದೆ.
ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ನಾಯಕರಿಗೊಂದು ಬಹಿರಂಗ ಪತ್ರ
ಪರಿಶಿಷ್ಟ ಮಕ್ಕಳನ್ನೇ ಶಿಕ್ಷಿಸಿದ ಜಾತಿಯ ಕೂಪದಲ್ಲಿರುವ ಶಿಕ್ಷಕರ ಈ ಜಾತಿರೋಗಕ್ಕೆ ಮದ್ದೇ ಇಲ್ಲದಂತಾಗಿದೆ. ತಾರತಮ್ಯಗಳಿಗೆ ಶಿಕ್ಷಣವೇ ಮದ್ದು ಎಂದು ಅಂಬೇಡ್ಕರ್ ಸಾಹೇಬರು ಹೇಳಿದ್ದರು. ಇಲ್ಲಿನ ಘಟನೆಯನ್ನು ನೋಡಿದರೆ ತಾರತಮ್ಯ ಮಾಡಲೆಂದೇ ಕೆಲವರು ಶಿಕ್ಷಕರಾಗಿದ್ದಾರೆನೋ ಎನಿಸುತ್ತದೆ. ಬೆಳಕು ನೀಡಬೇಕಾದ ಕೇಂದ್ರಗಳೇ ಕತ್ತಲೆಯ ಕೂಪದೊಳಗೆ ಬಿದ್ದಿವೆ ಎಂಬುದನ್ನು ಈ ಘಟನೆ ನಮಗೆ ಮನವರಿಕೆ ಮಾಡಿಕೊಡುತ್ತದೆ. ಗಲೀಜು ಮನಃಸ್ಥಿತಿಯ ಜನರು ಗಲೀಜು ಬಳಿಯಲು ಪರಿಶಿಷ್ಟ ಮಕ್ಕಳನ್ನೇ ಬಳಸಿಕೊಳ್ಳುತ್ತಾರೆ.
ಇಂತಹವರು ಜಾತ್ಯತೀತ ಸಮಾಜವನ್ನು ಅಣಕ ಮಾಡುತ್ತಿದ್ದಾರೆನೋ ಎನಿಸುತ್ತದೆ. ಅವರು ಜಾತೀಯತೆಯನ್ನೇ ಉಸಿರಾಡುತ್ತ ಅಸಹನೀಯ ಗಲೀಜು ಮನಃಸ್ಥಿತಿಯನ್ನು ಹೊಂದಿ ಮಕ್ಕಳನ್ನು ಬಲಿಪಶು ಮಾಡಿದ್ದಾರೆ. ಇದರ ಹೊರತಾಗಿ ಜೀವನದಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿ ಉಳಿಸುವುದು ಮುಖ್ಯವಾಗುತ್ತದೆ. ಶಾಲೆಗಳು ಆರೋಗ್ಯಕರವಾದ ಪರಿಸರವನ್ನು ನಿರ್ಮಿಸಬೇಕು, ಜೀವಪರವಾದ ನೈತಿಕ ಗುಣವನ್ನೇ ಪರಮ ಧ್ಯೇಯವಾಗಿಟ್ಟುಕೊಳ್ಳಬೇಕು ಎಂದು ಡಾ. ಸಿದ್ದಯ್ಯ ರೆಡ್ಡಿಹಳ್ಳಿಯವರ ತಮ್ಮ ಆಶಯ ವ್ಯಕ್ತ ಪಡಿಸಿದ್ದಾರೆ.