ಅ.2ರಂದು ನಡೆದ ಸ್ವಚ್ಛತಾ ಅಭಿಯಾನ – ನಂತರದ ದಿನಗಳಲ್ಲಾಗಿದ್ದೇನು?

Date:

Advertisements

ಅಕ್ಟೋಬರ್‌ 2ರಂದು ಗಾಂಧೀಜಿ ಜಯಂತಿ ಆಚರಣೆ ನಡೆದಿದೆ. ಅಂದು ʼಸ್ವಚ್ಛ ಭಾರತ ಅಭಿಯಾನʼದಡಿ ಎಲ್ಲಡೆ ಸ್ವಚ್ಛತಾ ಅಭಿಯಾನ ನಡೆದಿದೆ. ಇದರಿಂದ ಒಂದಿಷ್ಟಾದರೂ ಬದಲಾವಣೆ ಆಗಿದೆಯಾ ಎಂದು ಹುಡಕಲು ಹೊರಟರೆ ಕಣ್ಣಿಗೆ ರಾಚುವುದು ವಿಲೇವಾರಿಯಾಗದೆ ಉಳಿದ ತ್ಯಾಜ್ಯ. ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆಗಳಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಇನ್ನು ಗ್ರಾಮಗಳಲ್ಲಿ ಚರಂಡಿ ಸಮಸ್ಯೆ, ರಸ್ತೆ ಮೇಲೆ ಹರಿಯುವ ಕೊಳಚೆ ನೀರು, ಕಲುಷಿತ ನೀರು ಸೇರಿದಂತೆ ಎಲ್ಲೆಡೆ ಅಸ್ವಚ್ಛತೆ ವ್ಯಾಪಿಸಿದೆ.

ಪ್ರಧಾನಿ ಮೋದಿ ʼಬಯಲು ಬಹಿರ್ದೆಸೆ ಮುಕ್ತ ಭಾರತʼ ಎಂದು ಘೋಷಣೆ ಮಾಡಿದ್ದಾರೆ. ಆದರೆ ಸ್ವಚ್ಛ ಭಾರತ ಅಡಿಯಲ್ಲಿ ನಿರ್ಮಿಸಿದ ಅದೆಷ್ಟು ಶೌಚಾಲಯಗಳು ಬಳಕೆಯಲ್ಲಿವೆ ಎಂಬುದು ವಾಸ್ತವದಲ್ಲಿ ನೋಡಿದರೆ ʼಸ್ವಚ್ಛ ಭಾರತ ಅಭಿಯಾನʼ ಬರೀ ಕಾಗದದ ಮೇಲೆ ಮಾತ್ರವೇ ಸೀಮಿತವಾಗಿದೆ. ಹೊರತು ಸಂಪೂರ್ಣ ಭಾರತ ʼಬಯಲು ಬಹಿರ್ದೆಸೆ ಮುಕ್ತʼ ಆಗಿಲ್ಲ ಎಂಬ ಸತ್ಯ ಬಹಿರಂಗವಾಗುತ್ತದೆ.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಸ್ವಚ್ಛತೆ ಕಾಣೆಯಾಗಿದೆ. ಅದರಲ್ಲೂ ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿಯೇ ಕಸದ ರಾಶಿ ಬಿದ್ದಿರುವುದು ಕಂಡು ಬರುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರಿಗೆ ಕಾಡುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಕ್ಯಾರೇ ಎನ್ನದೇ ʼಸ್ವಚ್ಛ ಭಾರತ ಅಭಿಯಾನʼಕ್ಕೆ ಚಾಲನೆ ನೀಡಿ ನಂತರದ ದಿನಗಳಲ್ಲಿ ತಿರುಗಿಯೂ ನೋಡದಂಥ ಪರಿಸ್ಥಿತಿ ಎದುರಾಗಿದೆ.

Advertisements
yadagiri 2
ಯಾದಗಿರಿ ನಗರದ ಹಳೆ ಜಿಲ್ಲಾ ಆಸ್ಪತ್ರೆ ಬಳಿ ಅಸ್ವಚ್ಛತೆ

“ಯಾದಗಿರಿ ನಗರದ ಹಳೆ ಜಿಲ್ಲಾ ಆಸ್ಪತ್ರೆಯ ಸುತ್ತಲೂ ಕಸದ ರಾಶಿ ಸಂಗ್ರಹವಾಗಿದೆ. ಆಸ್ಪತ್ರೆ ಮುಂಭಾಗದಲ್ಲೇ ಘನತ್ಯಾಜ್ಯ ಹಾಕುತ್ತಿದ್ದರೂ ಯಾವುದೇ ಅಧಿಕಾರಿಗಳು ಕೇಳೊರಿಲ್ಲ ಎಂಬಂತಾಗಿದೆ. ಕಸದ ಗಬ್ಬು ವಾಸನೆಯಿಂದ ಆಸ್ಪತ್ರೆಗೆ ಬರುವ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಎಂಬುದು ಗಮನಕ್ಕೆ ಇದ್ದರೂ ಆಸ್ಪತ್ರೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಹಲವು ವರ್ಷಗಳಿಂದ ಆಸ್ಪತ್ರೆಯ ಒಂದು ಗೇಟ್ ಮುಚ್ಚಿದ್ದಾರೆ. ಅಲ್ಲೇ ನೀರಿನ ಪೈಪ್ ಒಡೆದ ಪರಿಣಾಮ ಹೊಲಸು ನೀರು ಸಂಗ್ರಹವಾಗುತ್ತಿದ್ದು, ಹಂದಿ, ನಾಯಿಗಳ ತಾಣವಾಗಿ ಮಾರ್ಪಟ್ಟಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಸ ವಿಲೇವಾರಿ ಮಾಡಬೇಕೆಂದು” ಸ್ಥಳೀಯ ನಿವಾಸಿ ರಾಹುಲ್‌ ಕೊಲ್ಲೂರಕರ್ ಆಗ್ರಹಿಸಿದರು.

ರಾಯಚೂರು ಜಿಲ್ಲೆ ಸಿಂಧನೂರು ಬಸ್ ನಿಲ್ದಾಣದ ಸುತ್ತಮುತ್ತ ಸುಮಾರು ದಿನಗಳಿಂದ ಕಸದ ರಾಶಿ ಸಂಗ್ರಹವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕಸ ವಿಲೇವಾರಿಗೆ ಮುಂದಾಗುತ್ತಿಲ್ಲ. ಇದರಿಂದ ಬಸ್‌ ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ ರೋಗದ ಭೀತಿ ಕಾಡುತ್ತಿದೆ ಎಂದು ಸ್ಥಳೀಯ  ಮುಖಂಡ ಬಸವರಾಜ್ ಬಾದರ್ಲಿ ನಗರಸಭೆ ವಿರುದ್ಧ ಬೇಸರ ವ್ಯಕ್ತಪಡಿಸಿದರು.

WhatsApp Image 2023 10 17 at 11.27.15 AM
ಸಿಂಧನೂರು ಬಸ್‌ ನಿಲ್ದಾಣದ ಬಳಿ ವಿಲೇವಾರಿಯಾಗದ ಕಸ

ಬೀದರ್‌ ಜಿಲ್ಲೆ ಬಸವಕಲ್ಯಾಣ ಬಸ್‌ ನಿಲ್ದಾಣದ ಆವರಣದಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದ್ದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಬಸ್‌ ನಿಲ್ದಾಣದಲ್ಲೇ ಹೊಲಸು ನೀರು ಸಂಗ್ರಹವಾಗಿದ್ದು ಹಂದಿಗಳ ಅವಸಾನವಾಗಿದೆ. ಬಸ್‌ ನಿಲ್ದಾಣದ ಸುತ್ತಲೂ ಕಸದ ರಾಶಿಯಿಂದ ಗಬ್ಬು ನಾರುತ್ತಿದ್ದರೂ ನಗರಸಭೆ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಕಸ ವಿಲೇವಾರಿಗೆ ಮುಂದಾಗುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸ್ವಚ್ಛ ಭಾರತ ಅಭಿಯಾನ ಬಗ್ಗೆ ಒಂದು ದಿನ ಜಾಗೃತಿ ಮೂಡಿಸಿ ತೆರಳುವ ಅಧಿಕಾರಿಗಳು ನಂತರದ ದಿನಗಳಲ್ಲಿ ಇತ್ತ ಇಣುಕಿಯೂ ನೋಡುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಂದೀಪ ಮುಂಕಿದೆ ಆಕ್ರೋಶ ವ್ಯಕ್ತಪಡಿಸಿದರು.

ಬಸ್‌ ನಿಲ್ದಾಣ ಬಸವಕಲ್ಯಾಣ
ಬಸವಕಲ್ಯಾಣ ಬಸ್‌ ನಿಲ್ದಾಣ ಆವರಣಲ್ಲಿ ಹಂದಿಗಳ ವಾಸ

ಸ್ವಚ್ಛತೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಜಿಲ್ಲಾಡಳಿತ, ಆದರೆ ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ಕಸ ವಿಲೇವಾರಿ ಆಗದೇ ಸಂಗ್ರಹವಾಗಿದೆ. ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಕಾಗದ, ಒಣ ಕಸ ಸಂಗ್ರಹವಾದರೂ ವಿಲೇವಾರಿ ಮಾಡದಿರುವುದು ಅಸ್ವಚ್ಛತೆಗೆ ಕಾರಣವಾಗಿದೆ. ಕಚೇರಿ ಕೆಲಸಗಳಿಗೆ ಬರುವ ಸಾರ್ವಜನಿಕರು ಜಿಲ್ಲಾಧಿಕಾರಿ ಆವರಣದ ಅಸ್ವಚ್ಛತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಬೀದರ್
ಬೀದರ್‌ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿ ಸಂಗ್ರಹವಾದ ಕಸ

ಸ್ವಚ್ಛತೆ ಬಗ್ಗೆ ಸರ್ಕಾರಗಳು ಕೊಟ್ಯಾಂತರ ರೂಪಾಯಿ ವ್ಯಯಿಸಿ ಜಾಗೃತಿ ಮೂಡಿಸಿದರೂ ಜನರು ಮಾತ್ರ ಕ್ಯಾರೇ ಎನ್ನಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವುದು ಸರ್ವೇಸಾಮಾನ್ಯವಾಗಿದೆ. ಇನ್ನು ಕಸದ ರಾಶಿ ಸಂಗ್ರಹವಾದರೂ ವಿಲೇವಾರಿ ಮಾಡದೇ ನಿರ್ಲಕ್ಷ್ಯ ವಹಿಸುವ ಸಂಬಂಧಪಟ್ಟ ಅಧಿಕಾರಿಗಳು ಸ್ಚಚ್ಛ ಭಾರತದ ಅಭಿಯಾನ ಅಚ್ಚುಕಟ್ಟಾಗಿ ಮುಗಿಸುವುದು ನೆಪ ಮಾತ್ರಕ್ಕೆ ಸೀಮಿತವಾಗಿದೆ. ಅಕ್ಟೋಬರ್‌ 2ರಂದು ಪೊರಕೆ ಹಿಡಿದು ಸ್ಚಚ್ಛಗೊಳಿಸುವ ಜನಪ್ರತಿನಿಧಿಗಳು ನಂತರದ ದಿನಗಳಲ್ಲಿ ಅಸ್ವಚ್ಛತೆ ಬಗ್ಗೆ ಕಟ್ಟುನಿಟ್ಟಿನ ಕ್ರಮ  ತೆಗೆದುಕೊಳ್ಳುವುದಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

“ನಗರದ ಸ್ವಚತೆ ಹಾಗೂ ನೈರ್ಮಲ್ಯ ನಿರ್ವಹಣೆ ನಗರಸಭೆಯ ಆದ್ಯ ಕರ್ತವ್ಯವಾಗಿದೆ. ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಯಲ್ಲೂ ನಗರಸಭೆ ವಿಫಲವಾಗಿದೆ. ಇದರಲ್ಲಿ ನಗರವಾಸಿಗಳ ನಿಷ್ಕಾಳಜಿ ಕೂಡ ಒಂದು ಕಾರಣ. ಪ್ರತಿದಿನ ಕಸದ ಗಾಡಿ ಬಾರದಿರುವ ಕಾರಣ ನಗರದ ಕೆಲವು ಓಣಿಯಲ್ಲಿ ದೊಡ್ಡ ದೊಡ್ಡ ತಿಪ್ಪೆ ಗುಂಡಿಗಳು ಹುಟ್ಟಿಕೊಂಡಿವೆ. ಬೀದರ್ ನಗರಸಭೆ ನಿರ್ವಹಿಸುವ ಸುಲ್ತಾನಪುರದ ಘನ ತ್ಯಾಜ್ಯ ವಿಲೇವಾರಿ ಘಟಕ ನಿಷ್ಕ್ರಿಯವಾಗಿದೆ. ಇದೆಲ್ಲದರ ಪರಿಣಾಮ ನಾವು ಭವಿಷ್ಯದಲ್ಲಿ ಬೆಲೆ ತೆತ್ತಬೇಕಾಗುತ್ತದೆ. ಸ್ವಚ್ಛ ಭಾರತ ಅಭಿಯಾನ ನೆಪ ಮಾತ್ರಕ್ಕೆ ಆಚರಣೆಯಾಗದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡರೆ ಮಾತ್ರ ಅದಕ್ಕೊಂದು ಮಹತ್ವ ಬರುತ್ತದೆ” ಎಂದು ಟೀಮ್‌ ಯುವಾ ಸಂಸ್ಥೆ ಸಂಯೋಜಕ ವಿನಯಕುಮಾರ್ ಮಾಳಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆ ಬೀದರ್‌
ಬೀದರ್‌ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಮಾವಣೆಯಾದ ಕಸದ ರಾಶಿ

ಎಲ್ಲೆಂದರಲ್ಲಿ ಸಂಗ್ರಹವಾದ ಕಸದ ರಾಶಿ, ಚರಂಡಿ ಸಮಸ್ಯೆ, ಸಮಪರ್ಕವಾಗಿ ಬಳಕೆಯಾಗದ ಶೌಚಾಲಯ ನೋಡಿದರೆ ನಗರ ಹಾಗೂ ಪಟ್ಟಣಗಳ ಗೌರವ, ಘನತೆಯನ್ನು ಗೇಲಿ ಮಾಡುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಸ್ವಚ್ಛತೆ ಎಂಬುದು ಮರೀಚಿಕೆ ಎಂಬಂತಾಗಿದೆ. ಇದರಿಂದ ಸಾಂಕ್ರಾಮಿಕ ರೋಗ, ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥರಾದ ಅದೆಷ್ಟೋ ಪ್ರಕರಣಗಳು ಜರುಗಿವೆ. ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲೇ ಅತಿ ಹೆಚ್ಚು ಜನ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಘಟನೆಗಳು ತಾಜಾ ಉದಾಹರಣೆವಾಗಿವೆ.

“ಒಂದು ದಿನ ಸ್ವಚ್ಛ ಭಾರತ ಅಭಿಯಾನ ನಡೆಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಬರೀ ತೋರಿಕೆಗಾಗಿ ಮಾಡುತ್ತಾರೆ ಅಷ್ಟೇ. ಅವರಿಗೆ ಸ್ಚಚ್ಛತೆ ಬಗ್ಗೆ ನಿಜವಾದ ಕಳಕಳಿ ಇರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಅನೇಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಲು ಮೂಲ ಕಾರಣ ಅನೈರ್ಮಲ್ಯ. ಸ್ವಚ್ಛತೆ ಬಗ್ಗೆ ಒಂದು ದಿನ ಅಭಿಯಾನ ನಡೆಸುವುದಲ್ಲ. ನಿರಂತರವಾಗಿ ಜಾಗೃತಿ ಮೂಡಿಸುವ ಮೂಲಕ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುವುದು ತುಂಬಾ ಅಗತ್ಯವಾಗಿದೆ” ಎಂದು ಜೇವರ್ಗಿಯ ಬೈಯಲಪ್ಪ ನಾಡಲಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸರ್ಕಾರ ಅಧೀನದಲ್ಲಿ ʼಬಿಎಸ್‌ಎಸ್‌ಕೆʼ ಆರಂಭವಾಗಲಿ; ರೈತ ಸಂಘ ಒತ್ತಾಯ

ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಘಟನೆಗಳು ನಡೆದಾಗ ಮಾತ್ರ ಎಚ್ಚರಗೊಳ್ಳುವ ಅಧಿಕಾರಿಗಳು ಮುಂಜಾಗೃತವಾಗಿಯೇ ಸ್ಚಚ್ಛತೆಗಾಗಿ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದರೆ ಅನೈರ್ಮಲ್ಯದಿಂದಾಗುವ ಹಲವು ಅಪಾಯಗಳು ತಪ್ಪಿಸಬಹುದು. ಆದರೆ ಮಳೆಗಾಲ ಆರಂಭದಲ್ಲಿ ಶುರುವಾದ ಅಸ್ವಚ್ಛತೆಯ ಅಘಾತಕಾರಿ ಬೆಳವಣಿಗೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅಷ್ಟೇ ಅಲ್ಲದೇ ಜೀವ ಬಲಿ ಪಡೆದಿರುವುದು ಆತಂಕ ಉಂಟು ಮಾಡುತ್ತವೆ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅಧಿಕಾಗಳು ವೈಜ್ಞಾನಿಕ ಕ್ರಮದಿಂದ ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಸೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X