ಬಾಗೇಪಲ್ಲಿ ತಾಲೂಕಿನ ಶಂಖಮವಾರಪಲ್ಲಿ ಗ್ರಾಮದ ಸ್ಮಶಾನ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಹಲವೆಡೆ ಸ್ಮಶಾನ ಭೂಮಿ ಮತ್ತು ನಕಾಶೆಗಳಲ್ಲಿರುವಂತೆ ಸ್ಮಶಾನಕ್ಕಿರುವ ರಸ್ತೆ, ರೈತರ ಜಮೀನುಗಳಿಗಿರುವ ದಾರಿಗಳು ಒತ್ತುವರಿಯಾಗಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಸಿಪಿಎಂ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಲಕ್ಷ್ಮಣ್ ರೆಡ್ಡಿ, ಹಲವು ಬಾರಿ ಶಂಖಮವಾರಪಲ್ಲಿ ಗ್ರಾಮದ ಸ್ಮಶಾನ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಾಗೆಯೇ ನಕಾಶೆಯಲ್ಲಿರುವಂತೆ ಸ್ಮಶಾನಕ್ಕೆ, ರೈತರ ಜಮೀನುಗಳಿಗೆ ದಾರಿಯನ್ನೂ ಕಲ್ಪಿಸದೇ, ಮೃತರ ಅಂತಿಮ ಸಂಸ್ಕಾರಕ್ಕೆ ಪರದಾಡುವಂತಾಗಿದೆ. ಹಾಗೆಯೇ ರೈತರು ಒಬ್ಬರ ಜಮೀನು ದಾಟಿ ಮತ್ತೊಬ್ಬರ ಜಮೀನುಗಳಿಗೆ ಹೋಗಲು ದಾರಿಗಳಿಲ್ಲ. ನಕಾಶೆಯಲ್ಲಿದ್ದರೂ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ರೈತರಿಗೆ ತೊಂದರೆ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ಮಾಜಿ ಜಿಲ್ಲಾ ಕಾರ್ಯದರ್ಶಿ ಎಂ.ಪಿ ಮುನಿವೆಂಕಟಪ್ಪ ಮಾತನಾಡಿ, ಈ ಭಾಗದಲ್ಲಿ ಶವ ಸಂಸ್ಕಾರಕ್ಕೆ ಹಲವೆಡೆ ಸೂಕ್ತ ಜಾಗವಿಲ್ಲ, ಸ್ಮಶಾನ ಜಾಗವಿದ್ದರೂ ಒತ್ತುವರಿ, ನಿರ್ವಹಣೆ ಕೊರತೆ, ದಾರಿ ಇಲ್ಲದಿರುವುದು ಮುಂತಾದ ಕಾರಣಗಳಿಂದ ಜನರಿಗೆ ಸ್ಮಶಾನ ಭೂಮಿ ಇಲ್ಲವಾಗಿದೆ. ಹಾಗಾಗಿ ತಾಲೂಕಿನೆಲ್ಲೆಡೆ ಸ್ಮಶಾನ ಜಾಗಗಳನ್ನು ಗುರುತಿಸಿ, ಅವುಗಳ ಸಂರಕ್ಷಣೆಗೆ ಕ್ರಮ ಜರುಗಿಸಬೇಕು. ಹಾಗೇಯೆ ಶಂಖಮವಾರಪಲ್ಲಿ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಫೆ.10ರಂದು ರೈತ ಸಂಘ ಬೃಹತ್ ಪ್ರತಿಭಟನೆ
ಈ ವೇಳೆ ಸಿಪಿಎಂ ಮುಖಂಡರಾದ ರಘುರಾಮರೆಡ್ಡಿ, ಚನ್ನರಾಯಪ್ಪ, ಬಿಳ್ಳೂರು ನಾಗರಾಜ್, ಸೋಮಶೇಖರ್, ಗ್ರಾಮಸ್ಥರಾದ ಎಸ್.ಎನ್.ಆದಿನಾರಾಯಣಪ್ಪ, ಹರೀಶ, ನಾರಾಯಣ ಸ್ವಾಮಿ, ನಂಜುಂಡಪ್ಪ, ಗಂಗಪ್ಪ, ವೆಂಕಟೇಶಪ್ಪ, ಗುರ್ರಪ್ಪ, ಗಂಗರಾಜು, ಸಿ.ಬಾವನ್ನಾ, ನಾಗರಾಜ ಮತ್ತಿತರರಿದ್ದರು.