- ಕ್ರೀಡಾ ಇಲಾಖೆಗೆ ಬೋಟಿಂಗ್‌ಗೆ ಕಲ್ಪಿಸುವ ಬಗ್ಗೆ ಚರ್ಚಿಸಿ ಕ್ರಮ
- ಕೆ.ಸಿ. ವ್ಯಾಲಿ ಜಲಶುದ್ಧೀಕರಣ ಘಟಕ, ಕೆರೆ ವೀಕ್ಷಿಸಿದ ಸಚಿವ
ಕೋಲಾರ ಜಿಲ್ಲೆಯ ನರಸಾಪುರ ಕೆರೆಯ ಒತ್ತುವರಿ ತೆರವುಗೊಳಿಸಬೇಕು ಹಾಗೂ ತ್ಯಾಜ್ಯವನ್ನು ತೆಗೆಯುವಂತೆ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋಲಾರದ ಕೆರೆಗಳನ್ನು ತುಂಬಿಸುವ ಕೆಸಿ ವ್ಯಾಲಿ ಯೋಜನೆ ಸ್ಥಳಕ್ಕೆ ಮತ್ತು ಬೆಂಗಳೂರಿನ ಅತಿದೊಡ್ಡ ಕೆರೆಯಾದ ಬೆಳ್ಳಂದೂರು ಕೆರೆಯ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕೋಲಾರ ಜಿಲ್ಲೆಯ ನರಸಾಪುರ ಕೆರೆಯಲ್ಲಿ ಕ್ರೀಡಾ ಇಲಾಖೆಗೆ ಬೋಟಿಂಗ್‌ಗೆ ಅವಕಾಶ ನೀಡಿದ್ದು, ಅದನ್ನು ಸಹ ಬೇಗ ಆರಂಭಿಸುವ ಕುರಿತಂತೆ ಆ ಇಲಾಖೆಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜಿಸಿದ ಕೆ.ಸಿ. ವ್ಯಾಲಿ ಯೋಜನೆ ಈಗ ಕಾರ್ಯಗತಗೊಂಡಿದೆ. ಇಡೀ ಭಾರತದಲ್ಲಿಯೇ ವಿಶಿಷ್ಟ ಎಂದು ಬಿಂಬಿಸಲಾದ ಕೆ.ಸಿ. ವ್ಯಾಲಿ ಯೋಜನೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವರದಾನವಾಗಿದೆ. ಈ ಮುಂಚೆ ಸುಮಾರು ಸಾವಿರ ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ದೊರೆಯದ ಸ್ಥಿತಿ ಇತ್ತು. ನೀರು ಸಂಸ್ಕರಿಸುವ ಈ ಯೋಜನೆಯಿಂದಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 126 ಕೆರೆಗಳು ಕಳೆದ ನಾಲ್ಕು ವರ್ಷಗಳಿಂದ ಭರ್ತಿಯಾಗಿ, ಈಗ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇದರಿಂದ ರೈತರು ಸಂತಸದಲ್ಲಿ ಇದ್ದಾರೆ. ಇನ್ಣೂ ಏನಾದರೂ ಸುಧಾರಣಾ ಕ್ರಮಗಳಿದ್ದರೆ ಅದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಈ ಯೋಜನೆಯ ಕಾರ್ಯಗತವಾದ ಹಿನ್ನೆಲೆಯಲ್ಲಿ ವೃಷಭಾವತಿ ವ್ಯಾಲಿ ಕೊಳಚೆ ನೀರು ಸಂಸ್ಕರಿಸಿ ತುಮಕೂರು, ಚಿಕ್ಕಬಳ್ಳಾಪುರ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಸೇರಿ ಒಟ್ಟು 259 ಕೆರೆಗಳ ಭರ್ತಿಗೆ 1081 ಕೋಟಿ ರೂ. ಕ್ರಿಯಾ ಯೋಜನೆಗೆ ಮಂಜೂರಾತಿ ದೊರೆತಿದ್ದು, ಮೊದಲ ಹಂತದಲ್ಲಿ 70 ಕೆರೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಬೋಸರಾಜು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಾಸಕರಿಗೆ ತರಬೇತಿ | ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಮರುಪರಿಶೀಲಿಸಿ: ಸಭಾಧ್ಯಕ್ಷರಿಗೆ ರಮೇಶ್ ಬಾಬು ಪತ್ರ
ಈ ಸಂದರ್ಭದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ನೀರಾವರಿ ಇಲಾಖೆಯ ಕಾರ್ಯದರ್ಶಿ ಜಿ.ಇ. ಯತೀಶ್‌ಚಂದ್ರನ್, ಮುಖ್ಯ ಅಭಿಯಂತರ ರಾಘವನ್ ಸೇರಿದಂತೆ ಒಳಚರಂಡಿ ಮಂಡಳಿಯ ಗಂಗಾಧರ್ ಸೇರಿದಂತೆ ಉಭಯ ಇಲಾಖೆಯ ಹಲವು ಅಧಿಕಾರಿಗಳು ಇದ್ದರು.