ರೈತ ದೇಶದ ಬೆನ್ನೆಲುಬು, ವ್ಯವಸಾಯ ಮುಖ್ಯ ಕಸುಬು ಎಂಬ ಸುಳ್ಳುಗಳ ಪಾಠಗಳನ್ನೇ ಮಾಡಿದ್ದಾರೆ. ಈ ಪಾಠ ಮಾಡಿದ ದೇಶದಲ್ಲಿ ರೈತರಷ್ಟು ಬೇರೆ ಯಾವ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳಿಲ್ಲ. ಅದರರ್ಥ, ಈ ದೇಶ ಮತ್ತು ಸರ್ಕಾರಗಳು ಕೃಷಿಕರಿಗೆ ಒಳಿತನ್ನು ಮಾಡುವುದಿಲ್ಲ. ಇತ್ತೀಚೆಗೆ ವ್ಯವಸಾಯದಲ್ಲಿ ಆದಾಯವೂ ಇಲ್ಲ, ಗೌರವವೂ ಇಲ್ಲ. ವ್ಯವಸಾಯ ತ್ಯಜಿಸುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ ಎಂಬುದನ್ನು ತೋರಿಸುತ್ತದೆ.
ಹವಾಮಾನ ವೈಪರೀತ್ಯದಿಂದ ರಾಜ್ಯದ ಹಲವೆಡೆ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿ ಜೀವಭಯ ಉಂಟುಮಾಡಿವೆ. ಅಲ್ಲದೆ ಕಟಾವಿಗೆ ಬಂದಿದ್ದ ಹಲವು ರೀತಿಯ ಬೆಳೆಗಳು ನೆಲಕಚ್ಚಿವೆ. ಕೈಗೆ ಬಂದ ಬೆಳೆ ಕಾಸು ತರಲಿಲ್ಲವೆಂದು ರೈತರು ಕಂಗಾಲಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯುವರೈತ ಸಿದ್ದು ಎಂಬುವವರು ಸುಮಾರು ಎರಡು ಎಕರೆಯಲ್ಲಿ ಬೆಳೆದಿದ್ದ ನೇಂದ್ರ ಬಾಳೆ ಗಾಳಿಮಳೆ ಹೊಡೆತಕ್ಕೆ ಸಿಲುಕಿ ನೆಲಕಚ್ಚಿದೆ. ಒಂಬತ್ತು ತಿಂಗಳಿನಿಂದ ಬೆಳೆಯನ್ನು ಜೋಪಾನ ಮಾಡಿದ್ದ ರೈತ, ಕೇವಲ ಒಂಬತ್ತು ನಿಮಿಷಗಳ ಗಾಳಿ-ಮಳೆಗೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಯುವರೈತ ಸಿದ್ದು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಎರಡು ಎಕರೆಯಲ್ಲಿ ನೇಂದ್ರ ಬಾಳೆ ಬೆಳೆದಿದ್ದು, 7 ತಿಂಗಳುಗಳ ಕಾಲ ಮಗುವಿನಂತೆ ಜೋಪಾನ ಮಾಡಿದ್ದೆ. ಇನ್ನು ಒಂದೂವರೆ ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಈಗ ನಾಲ್ಕು ದಿನಗಳ ಹಿಂದಷ್ಟೇ ₹30,000 ಗೊಬ್ಬರವನ್ನು ತಂದು ಹಾಕಿದ್ದೆ. ನಿನ್ನೆ ಸುರಿದ ಒಂದೇ ಒಂದು ಮಳೆಗೆ ಇಡೀ ಬೆಳೆ ನೆಲಕಚ್ಚಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬೆಳೆ ಬೆಳೆಯಲು ಈವರೆಗೆ ₹3 ಲಕ್ಷಕ್ಕೂ ಅಧಿಕ ವೆಚ್ಚವಾಗಿದೆ. ಹೆಚ್ಚು ಕಡಿಮೆ ₹10 ರಿಂದ ₹12 ಲಕ್ಷ ಆದಾಯ ಸಿಗುತ್ತಿತ್ತು. ಆದರೆ ಬಾಳೆ ಗಿಡದ ಒಂದೇ ಒಂದು ಕಟ್ಟೆಯು ಉಳಿದಿಲ್ಲ, ಪೂರ್ತಿಯಾಗಿ ನೆಲಕ್ಕುರುಳಿವೆ. ಕಳೆದ ವರ್ಷ ಇದೇ ರೀತಿ ಬೆಳೆದಿದ್ದೆ, ಒಂದೊಂದು ಗೊನೆ 20 ಕೆಜಿವರೆಗೂ ಇತ್ತು. ಈ ಬಾರಿಯೂ ಅದೇ ರೀತಿಯ ಬೆಳೆ ಬಂದಿತ್ತು. 17 ರಿಂದ 18 ಕೆಜಿ ಇದ್ದವು. ಈಗ ಕೆಜಿಗೆ ₹50 ಬೆಲೆ ಇತ್ತು. ಇನ್ನು ಒಂದೂವರೆ ತಿಂಗಳು ಇದ್ದಿದ್ದರೆ ಒಳ್ಳೆಯ ಆದಾಯ ಸಿಗುತ್ತಿತ್ತು. ಅಷ್ಟರಲ್ಲಿ ಹೀಗಾಗಿಹೋಯ್ತು. ಕೈಗೆ ಬಂದದ್ದು ಬಾಯಿಗೆ ಬರದಂತಾಯಿತು” ಎಂದು ಅಲವತ್ತುಕೊಂಡರು.
“ಮಳೆಗಾಳಿಗೆ ಸಿಲುಕಿರುವ ನಮ್ಮ ಊರಿನ ದೃಶ್ಯಗಳು ಮಾಧ್ಯಮದ ಕಣ್ಣಿಗೆ ಬೀಳದ ದುರಂತ ಚಿತ್ರಗಳು. ನಮ್ಮ ರೈತರ ಬದಕನ್ನು ಅರ್ಧ ಗಂಟೆಯಲ್ಲಿ ನಾಶ ಮಾಡಿ, ಬಿಟ್ಟುಹೋದ ಅವಶೇಷಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮಗೆ ನೆನಪಿರುವ ಮಟ್ಟಿಗೆ, ನಮ್ಮ ಜೀವನಾನುಭವದಲ್ಲಿ ಇಷ್ಟೊಂದು ಹಾನಿ ಮಾಡಿರುವ ಗಾಳಿ ಮಳೆಯನ್ನು ನಾವು ನೋಡಿಲ್ಲ ಎನ್ನುತ್ತಾರೆ ಲೈನ್‌ಮ್ಯಾನ್ ಹುಡುಗರು” ಎಂದು ಚಿನ್ನಸ್ವಾಮಿ ವಡ್ಡಗೆರೆ ಹೇಳಿಕೊಂಡಿದ್ದಾರೆ.
“ನೆಲಕಚ್ಚಿರುವ ಬಾಳೆ ತೋಟಗಳ ಎದುರು ತಲೆ ಮೇಲೆ ಕೈಹೊತ್ತು ಕುಳಿತ ಕುಟುಂಬಗಳನ್ನು ನೋಡಿದರೆ ಕಣ್ಣೀರು ಬರುತ್ತೆ.
ಇನ್ನು ಕಟಾವಿನ ಹಂತದಲ್ಲಿದ್ದ ಬಾಳೆ ನೆಲಕಚ್ಚಿದರೆ ಕಷ್ಟಪಟ್ಟು ಬೆಳೆದವರಿಗೆ ಹೇಗಾಗಬೇಡ. ಆಸೆ, ಕನಸು, ಕನವರಿಕೆಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ದಾರಿ ಕಾಣದೆ ನಿಲ್ಲುವಂತಹ ಸ್ಥಿತಿಗೆ ಬಂದು ತಲುಪಿದೆ ರೈತಾಪಿ ವರ್ಗ” ಎನ್ನುತ್ತಾರೆ.

“ಶೀಲವಂತಪುರ, ಹುಲ್ಲನಪುರ, ಕೊಡಸೋಗೆ ಸುತ್ತಮುತ್ತ ದುಡಿಯುವ ಜನರ ಕಣ್ಣಂಚು ತೇವವಾಗಿದೆ. ಅವರ ಮೊಗದಲ್ಲಿ ನಿರಾಸೆ ಎದ್ದು ಕಾಣುತ್ತದೆ. ಹತ್ತಕ್ಕೂ ಹೆಚ್ಚು ಸಿಮೆಂಟ್ ಕಂಬಗಳು ಮುರಿದು ಬಿದ್ದಿವೆ. ರಸ್ತೆ ತುಂಬಾ ಕರೆಂಟ್ ತಂತಿಗಳು ಚೆಲ್ಲಾಡಿವೆ. ತಂತಿಗಳ ಮೇಲೆ ಮುರಿದು ಬಿದ್ದಿರುವ ಬೃಹತ್ ಮರಗಳು, ವಾಸದ ಮನೆಗಳ ಮೇಲೆ ಮುರಿದು ಬಿದ್ದ ಕಂಬಗಳು, ಮರಗಳು, ವಿದ್ಯುತ್ ತಂತಿಗಳಿಗೆ ಸಿಕ್ಕಿ ನೇತಾಡುತ್ತಿರುವ ಶೀಟ್‌ಗಳು ಇವೆಲ್ಲವನ್ನೂ ನೋಡುತ್ತಿದ್ದರೆ ಮನಸ್ಸು ಭಾರವಾಗುತ್ತದೆ” ಎಂದು ನೊಂದುಕೊಂಡರು.
“ಗುಂಡ್ಲುಪೇಟೆ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಧಾವಿಸಬೇಕು. ಮಾನವೀಯತೆ, ಕರ್ತವಪ್ರಜ್ಞೆ ಎನ್ನುವುದು ಕಿಂಚಿತ್ತಾದರೂ ನಮ್ಮ ಅಧಿಕಾರಿಗಳಲ್ಲಿ ಇದ್ದರೆ ಕೂಡಲೇ ಸ್ಥಳಕ್ಕೆ ಆಗಮಿಸಿ ತಕ್ಷಣ ಪರಿಹಾರ ಕೊಡಿಸಬೇಕು” ಎಂದು ಆಗ್ರಹಿಸಿದರು.

”ಕ್ಷೇತ್ರದ ಶಾಸಕರು, ಅಧಿಕಾರಿಗಳು ಇಂತಹ ಸಂಕಷ್ಟ ಸಮಯದಲ್ಲಿ ಹೇಗೆ ನೆರವಾಗುತ್ತಾರೆ ಎನ್ನುವುದನ್ನು ಪ್ರಜ್ಞಾವಂತ ನಾಗರಿಕರು ಗಮನಿಸುತ್ತಿದ್ದಾರೆ” ಎನ್ನುವುದನ್ನು ಹೇಳದೆ ಇರಲಿಲ್ಲ.
ಕೊಪ್ಪಳದಲ್ಲಿ ಸುರಿದ ಮಳೆಯಿಂದ ಭತ್ತದ ಬೆಳೆ ಹಾನಿಯಾಗಿದೆ. 10,653 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಸುಮಾರು ₹109 ಕೋಟಿ ನಷ್ಟ ಉಂಟಾಗಿದೆ. ಈವರೆಗೆ ರಾತ್ರಿಯೆಲ್ಲ ನಿದ್ದೆಗೆಟ್ಟು ರೈತರು ಗದ್ದೆಗಳಿಗೆ ಕಾಲುವೆಗಳಿಂದ ನೀರಾಯಿಸಿರುತ್ತಾರೆ. ಈಗ ಒಂದೇ ಬಾರಿಗೆ ಸುರಿದ ಮಳೆಗೆ ಸಿಲುಕಿದ ಭತ್ತ ಜಲಾವೃತವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಭತ್ತ, ಪಪ್ಪಾಯಿ, ಮೆಕ್ಕೆಜೋಳ, ಬಾಳೆ ಬೆಳೆಗಳೂ ನಾಶವಾಗಿವೆ. 80 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳ, 285 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಗಂಗಾವತಿ, ಕಾರಟಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು 12,722 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.
ಕಾರಟಗಿ ತಾಲೂಕಿನ 12 ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಸುರಿದು ಅತಿಹೆಚ್ಚು ಬೆಳೆ ನಾಶವಾಗಿದೆ. ಕಾರಟಗಿಯಲ್ಲಿ ಒಟ್ಟಾರೆ 4,895 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 12,722 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.

ಇದೇ ರೀತಿ ಈಗ ಕಾಫಿ ಹೂ ಬಿಟ್ಟಿರುವ ಸಮಯ, ಈ ವೇಳೆ ಹೀಗೆ ಗಾಳಿ ಮಳೆ ಸುರಿದರೆ ಕಾಫಿ ಹೂಗಳೆಲ್ಲ ನೆಲಕ್ಕುದುರಿ ಕಾಯಿಗಟ್ಟುವುದಿಲ್ಲ. ಇದರಿಂದ ಕಾಫಿ ಇಳುವರಿ ಕಡಿಮೆಯಾಗುತ್ತದೆ. ಕಾಫಿ ಬೆಳೆಗಾರರೂ ಕೂಡ ನಷ್ಟ ಅನುಭವಿಸುವಂತಹ ಸ್ಥಿತಿ ಎದುರಾಗುತ್ತದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ; ಕೆರೆಯಂತಾದ ರಸ್ತೆಗಳು
ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಉಳಿದಿರುವ ಬೆಳೆಯನ್ನಾದರೂ ದಕ್ಕಿಸಿಕೊಳ್ಳೋಣವೆಂದು ರೈತರು ನೆಲಕಚ್ಚಿದ ಬೆಳೆಯನ್ನು ಬದುವಿಗೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಬಿದ್ದ ಒಂದೇ ಒಂದು ಮಳೆ ರೈತರಲ್ಲಿ ಭಯ, ಆತಂಕ ಸೃಷ್ಟಿಸಿದೆ.
ರೈತ ದೇಶದ ಬೆನ್ನೆಲುಬು, ವ್ಯವಸಾಯ ಮುಖ್ಯ ಕಸುಬು ಎಂಬ ಸುಳ್ಳುಗಳ ಪಾಠಗಳನ್ನೇ ಮಾಡಿದ್ದಾರೆ. ಈ ಪಾಠ ಮಾಡಿದ ದೇಶದಲ್ಲಿ ರೈತರಷ್ಟು ಬೇರೆ ಯಾವ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳಿಲ್ಲ. ಅದರರ್ಥ, ಈ ದೇಶ ಮತ್ತು ಸರ್ಕಾರಗಳು ಕೃಷಿಕರಿಗೆ ಒಳಿತನ್ನು ಮಾಡುವುದಿಲ್ಲ. ಇತ್ತೀಚೆಗೆ ವ್ಯವಸಾಯದಲ್ಲಿ ಆದಾಯವೂ ಇಲ್ಲ, ಗೌರವವೂ ಇಲ್ಲ. ವ್ಯವಸಾಯ ತ್ಯಜಿಸುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ ಎಂಬುದನ್ನು ತೋರಿಸುತ್ತದೆ.
ಬೇಸಿಗೆಯ ದಿನಗಳಲ್ಲಿ ಸಾಮಾನ್ಯವಾಗಿ ಬಿಸಿಲು ಹೆಚ್ಚಾಗಿದ್ದು, ಮಳೆಯಾಗುವುದು ಕಡಿಮೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಅಕಾಲಿಕ ಮಳೆ ಸುರಿಯತೊಡಗಿದೆ. ಮಳೆಯೊಂದಿಗೆ ಬಿರುಗಾಳಿ ಗುಡುಗು, ಸಿಡಿಲು ಉಂಟಾಗುತ್ತಿರುವುದರಿಂದ ಅಪಾರ ಹಾನಿ ಸಂಭವಿಸುತ್ತಿದೆ.
ತೊಗರಿಯ ನಾಡು ಎಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಸರಿಸುಮಾರು 6.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯನ್ನು ಬೆಳೆಯಲಾಗಿತ್ತು. ತದನಂತರ, ಹಿಂಗಾರಿನಲ್ಲಿ ಭಾರೀ ಮಳೆಯಾದ್ದರಿಂದ ಶೇ.50ರಷ್ಟು ಬೆಳೆ ನಾಶವಾಗಿದೆ. ಮಾರುಕಟ್ಟೆ ಬೆಲೆಗಳು ಕುಸಿಯುತ್ತಿರುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ಕಲಬುರಗಿ ಜಿಲ್ಲೆಯೊದರಲ್ಲೇ ಜನವರಿ-ಮಾರ್ಚ್ ತಿಂಗಳ ನಡುವೆ ಆರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಪ್ರತಿವರ್ಷ ಕೃಷಿ ಕ್ಷೇತ್ರಕ್ಕಾಗಿಯೇ ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತವೆ. ಆದರೆ ಆ ಹಣ ಎಲ್ಲಿಗೆ ಹೋಗುತ್ತದೆ ಎನ್ನುವುದು ಮಾತ್ರ, ಯಾರಿಗೂ ತಿಳಿಯದಾಗಿದೆ. ಇಂತಹ ಸಂದರ್ಭದಲ್ಲಿ ಮಳೆ-ಬೆಳೆಯೊಂದಿಗೆ ಜೂಜಾಟಕ್ಕಿಳಿಯುವ ರೈತರ ಬದುಕು- ನೀ ಸಾಯ, ನಾ ಸಾಯ, ಮನೆಮಂದಿಯೆಲ್ಲ ಸಾಲ ಎನ್ನುವ ಮಾತನ್ನು ಗಟ್ಟಿಗೊಳಿಸುತ್ತಲೇ ಸಾಗಿದೆ.
ನೀವು ಬಾಳೆಯನ್ನು ಪ್ರೂನಿಂಗ್ ಮಾಡಬೇಕಿತ್ತು 9620377704
1ಮರದಲ್ಲಿ 5ರಿಂದ 6 ಎಲೆ ಬಿಡಿ ಪ್ರತಿ 7ರಿಂದ 12 ದಿನಗಳ ಅಂತರದಲ್ಲಿ 1ರಿಂದ 2 ಹಳೆಯ ಎಲೆಗಳನ್ನು ತೆಗೆಯಿರಿ ಇದರಿಂದ ನನಗೆ ಒಳ್ಳೆಯ ಫಲಿತಾಂಶ ಸಿಕ್ಕಿದೆ 💐🙏