ರಾಜ್ಯದಲ್ಲಿ ನಿರೀಕ್ಷಿಸಿದ ಮಟ್ಟಕ್ಕೆ ಮುಂಗಾರು ಮಳೆ ಸುರಿದಿಲ್ಲ. ಹಾವೇರಿ ಜಿಲ್ಲೆಯಲ್ಲಿಯೂ ಮುಂಗಾರು ಆಗಮನ ತಡವಾಗಿದೆ. ಈ ಹಿನ್ನೆಲೆ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ್ ಅವರು, ಮೋಡ ಬಿತ್ತನೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ರಾಣೆಬೆನ್ನೂರ್ ಶಾಸಕ ಪ್ರಕಾಶ್ ಕೋಳಿವಾಡ್ ಸ್ವಂತ ಮೋಡ ಬಿತ್ತನೆ ವಿಮಾನ ಹೊಂದಿದ್ದಾರೆ. ಜಿಲ್ಲಾಧಿಕಾರಿ ಪ್ರಯೋಗಾರ್ಥವಾಗಿ ಮೋಡ ಬಿತ್ತನೆ ನಡೆಸಲು ಅನುಮತಿ ನೀಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಮೋಡಬಿತ್ತನೆ ವಿಮಾನ ಪರವಾನಗಿ ಪಡೆಯಲು ಎಲ್ಲ ಸಿದ್ದತೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅನುಮತಿ ನೀಡಿದರೆ ಹಾವೇರಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತವಾಗಿ ಮೋಡಬಿತ್ತನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಮೋಡ ಇದ್ದರೆ ಮಾತ್ರ ಮೋಡ ಬಿತ್ತನೆ ಮಾಡಲು ಬರುತ್ತೆ, ಅದರಿಂದ ಮಳೆಯಾಗುತ್ತೆ. 2015 ರಲ್ಲಿಯೂ ಸಹ ಬರಗಾಲ ಬಂದಾಗ ನಾನು ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಿದ್ದೆ. ವಿಧಾನಸಭೆ ಚುನಾವಣೆ ವೇಳೆ ಈ ಕುರಿತಂತೆ ಜಿಲ್ಲೆಯ ಪ್ರಣಾಳಿಕೆಯಲ್ಲಿ ಸಹ ಅಂಶ ಸೇರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆ ಆಗಿಲ್ಲ. ಮೇ 25 ರಂದು ಕೇರಳಕ್ಕೆ ಆಗಮನವಾಗಬೇಕಿದ್ದ ಮುಂಗಾರು ತಡವಾಗಿದೆ. ಇದರಿಂದ ರಾಜ್ಯಕ್ಕೆ ಸಹ ಮುಂಗಾರು ತಡವಾಗಿ ಪ್ರವೇಶಿಸಿದೆ. ಹಾಗಾಗಿ ಮಳೆ ಆಶ್ರಯಿಸಿ ಜಮೀನುಗಳಲ್ಲಿ ಬಿತ್ತನೆ ಮಾಡಬೇಕಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಮೋಡಬಿತ್ತನೆ ಮಾಡಲು ನಮ್ಮ ಸಂಸ್ಥೆಗೆ ಅನುಮತಿ ನೀಡಿ ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಹೀನಾಯ ಸೋಲಿಗೆ ಕಾರಣನಾದ ನಾಮಕಾವಸ್ಥೆ ಅಧ್ಯಕ್ಷ ಕಟೀಲ್: ಕಾಂಗ್ರೆಸ್
ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಿದ್ದಂತೆ ಅದನ್ನು ದೆಹಲಿಯ ಕೇಂದ್ರ ಸರ್ಕಾರ ಹವಾಮಾನ ಇಲಾಖೆಗೆ ತಿಳಿಸಬೇಕು. ಇದಕ್ಕಾಗಿ ಸಂಸ್ಥೆಯ ಇಬ್ಬರು ಸಿಬ್ಬಂದಿ ಈಗಾಗಲೇ ದೆಹಲಿಯಲ್ಲಿದ್ದಾರೆ. ಈ ಎಲ್ಲ ಇಲಾಖೆಗಳ ಅನುಮತಿ ಸಿಕ್ಕರೆ ಜುಲೈ ಒಂದರಂದು ಜಿಲ್ಲೆಯಲ್ಲಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದಿದ್ದಾರೆ.
ನಮ್ಮ ಕಂಪನಿಯ ಕೆಲಸವೇ ಇದಾಗಿದ್ದರಿಂದ ನನಗೆ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಸಾಧ್ಯವಾಗುತ್ತದೆ. ಬೇರೆಯವರಾದರೆ ಅಧಿಕ ಖರ್ಚಾಗುತ್ತದೆ. ಮೋಡ ಬಿತ್ತನೆ ಕಂಪನಿಗಳಿವೆ. ಆದರೆ, ವಿಮಾನ ಇರುವುದು ನನ್ನ ಬಳಿ ಮಾತ್ರ. ಅಮೆರಿಕದಲ್ಲಿ ಮೋಡಬಿತ್ತನೆ ಮಾಡಿದ್ದ ವಿಮಾನ ತನ್ನ ಬಳಿ ಇದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ್ ಹೇಳಿದ್ದಾರೆ.