ಪ್ರಸ್ತುತ ಕೃಷಿಯನ್ನು ಬಿಟ್ಟು ನಗರಗಳತ್ತ ಮುಖಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಸಹಕಾರ ಸಂಘಗಳು ಕೃಷಿ ಅಭಿವದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸಬೇಕು. ಸರಕಾರಗಳು ನೂರಾರು ರೈತಪರ ಯೋಜನೆಗಳನ್ನು ಜಾರಿಗೆ ತಂದರೂ, ಕೃಷಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಿಲ್ಲ. ಆದ್ದರಿಂದ, ರೈತರ ಅಭಿವದ್ಧಿಗೆ ಸಂಘಗಳು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕಿದೆ. ಆಹಾರ ಮತ್ತು ಆರ್ಥಿಕ ಸ್ವಾವಲಂಬನೆ ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ನಾಗರಾಜು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ನಿ, ಚಿಕ್ಕಬಳ್ಳಾಪುರ ಸಹಕಾರ ಇಲಾಖೆ ಹಾಗೂ ಬಾಗೇಪಲ್ಲಿ ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಸಂಯಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ತತ್ವ ಮತ್ತು ಆಚರಣೆಯಲ್ಲಿ ಅಪಾರ ವಿಶ್ವಾಸವನ್ನು ಇರಿಸಿಕೊಂಡಿದ್ದ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರು ಸಹಕಾರ ತತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಬಹುದೆಂಬ ಆಶಯವನ್ನು ಇಟ್ಟುಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದರು. ಇದು ಸಹಕಾರ ಚಳುವಳಿಯ ಬೆಳವಣಿಗೆಗೆ ದಾರಿಯಾಯಿತು ಎಂದು ಹೇಳಿದರು.
ಪಂಡಿತ್ ನೆಹರೂ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ನವೆಂಬರ್ 14ರಿಂದ 20 ರವರೆಗೆ ರಾಷ್ಟ್ರದಾದ್ಯಂತ “ಅಖಿಲ ಭಾರತ ಸಹಕಾರ ಸಪ್ತಾಹ” ನಡೆಯಲಿದ್ದು, ನಮ್ಮ ದೇಶ ವಿಶ್ವದಲ್ಲೇ ಅತ್ಯುತ್ತಮ ಸಹಕಾರ ಚಳುವಳಿಯನ್ನು ಹೊಂದಿದೆ ಎಂದು ತಿಳಿಸಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ವಿ.ಮಂಜುನಾಥ ರೆಡ್ಡಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಭಿವೃದ್ಧಿಯಾದರೆ ರೈತರ ಅಭಿವದ್ಧಿ ಸಾಧ್ಯವಾಗುತ್ತದೆ. ಸಂಘಗಳಲ್ಲಿ ರಾಜಕೀಯ ಬೆರೆಸುವ ಬದಲು ರಾಜಕೀಯ ಮುಕ್ತವಾಗಿ ಸಹಕಾರ ಸಂಘಗಳ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಸಹಕಾರ ಸಂಘಗಳು ಮುಕ್ತವಾಗಿ ಕೆಲಸ ಮಾಡಬೇಕು. ಸಹಕಾರ ಸಂಘಗಳ ಉಳಿವಿನಲ್ಲಿ ರೈತರ ಹಿತ ಮತ್ತು ಬಲವರ್ಧನೆಯು ಅಡಗಿದೆ. ಹಾಗಾಗಿ ಪಕ್ಷಾತೀತವಾಗಿ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಎಲ್ಲಾ ರಾಜಕಾರಣಿಗಳು ಪಕ್ಷಬೇಧ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಸಮಾರಂಭದಲ್ಲಿ ಸಹಕಾರ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಮಲಕಚರವುಪಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡಕ್ಕೆ 2.5ಲಕ್ಷ ರೂ. ಚೆಕ್ ವಿತರಣೆ ಮಾಡಲಾಯಿತು.
ಇದನ್ನೂ ಓದಿ : ಬಾಗೇಪಲ್ಲಿ | ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಭೂಮಿ ಪೂಜೆ
ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಪದಾಧಿಕಾರಿಗಳಾದ ಅಮರ್, ಕೆ.ಎನ್.ಲಕ್ಷ್ಮೀಪತಿ, ಪ್ರಭಾಕರ್ ರೆಡ್ಡಿ, ಚಂದ್ರಶೇಖರ ರೆಡ್ಡಿ, ಲಕ್ಷ್ಮೀದೇವಮ್ಮ, ಶಂಕರ್, ಶ್ರೀನಿವಾಸ್ ಗೌಡ, ವೇಣು, ಪ್ರೇಮ್ ಕುಮಾರ್, ಕೆ.ಸಿ.ಗುರಪ್ಪ, ಜಿ.ಸಿ.ವಿನಯ್ ಕುಮಾರ್, ಬಾಬುರೆಡ್ಡಿ, ಮಲ್ಲಿಕಾರ್ಜುನ, ಎನ್.ನಾಗಭೂಷಣ, ಪ್ರದೀಪ್ ಬಿ.ವಿ, ಪತ್ರಕರ್ತರಾದ ಡಿ.ಎನ್.ಕೃಷ್ಣಾರೆಡ್ಡಿ ಹಾಗೂ ವಿವಿಧ ಸಂಘಗಳ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.