ರಾಜ್ಯದ ಕೆಲವೆಡೆ ಶೀತ ಅಲೆ ಕಾಣಿಸಿಕೊಳ್ಳುವುದರಿಂದ ಚಳಿಯ ತೀವ್ರತೆ ಹೆಚ್ಚುತಿದ್ದು, ಬುಧವಾರ ಮೂರು ಜಿಲ್ಲೆಗಳಿಗೆ ಶೀತ ಅಲೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ವಿಜಯಪುರ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಬುಧವಾರವೂ ಶೀತ ಅಲೆ ಕಾಣಿಸುಕೊಳ್ಳುವ ಸಾಧ್ಯತೆ ಇದೆ. ಎರಡು ದಿನಗಳ ಬಳಿಕ ಕನಿಷ್ಠ ತಾಪಮಾನ ಹೆಚ್ಚಾಗುವ ಸಂಭವವಿದೆ. ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಡಿಮೆಯಾಗಿದ್ದರಿಂದ ಚಳಿ ಹೆಚ್ಚಳವಾಗಿದೆ.
ಮಂಗಳವಾರ ಬೆಳಿಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ ದಿನ 24 ಗಂಟೆಗಳಲ್ಲಿ ಕನಿಷ್ಠ ಉಷ್ಣಾಂಶವು ವಿಜಯಪುರದಲ್ಲಿ 8 ಡಿಗ್ರಿ ಸೆಲ್ಸಿಯಸ್ ಇಳಿಕೆಯಾದರೆ, ಬೀದರ್‌ನಲ್ಲಿ 8.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯು ಡಿ.18 ರಂದು ರೆಡ್ ಅಲರ್ಟ್ ಮತ್ತು ಡಿ.19 ರಂದು ಎಲ್ಲೊ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೆಹರೂ ನಿಂದಿಸಿದರೆ ಅಲ್ಪರು ಮಹಾನ್ ನಾಯಕರಾಗಲು ಸಾಧ್ಯವೇ?
ಈ ಅವಧಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ 5-6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ಇರಲಿದೆ. ಸಾರ್ವಜನಿಕರು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಅವಶ್ಯವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ವೆಟರ್, ಜಾಕೇಟ್, ಉಲನ್ ಟೋಪಿ, ಕೈ ಗ್ಲೋಸ್ ಧರಿಸಬೇಕು. ವಿಶೇಷವಾಗಿ ಚಿಕ್ಕಮಕ್ಕಳನ್ನು ಹೊರಗಡೆ ಬಿಡಬಾರದು ಎಂದು ವಿನಂತಿಸಿದ್ದಾರೆ.