ಹಿಂದಿನ ಸರ್ಕಾರದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರ ಇಡೀ ಮಂಡಳಿಯ ಉದ್ದೇಶಿತ ಹಾದಿಯನ್ನೇ ಮುಳುಗಿಸಿತ್ತು. ಕೇವಲ ಹೆಸರಿಗೆ ₹5,000 ಕೋಟಿ ಹಣ ಕೊಟ್ಟಿರುವುದಾಗಿ ಹೇಳಿ ಮೋಸ ಮಾಡಿದ್ದು, ಅನೇಕ ಕಾನೂನುಗಳನ್ನು ಉಲ್ಲಂಘಿಸಿ ಹಣ ಲೂಟಿ ಮಾಡುವ ಕೆಟ್ಟ ಸಂಪ್ರದಾಯ ಚಾಲ್ತಿಯಲ್ಲಿದ್ದದ್ದು ಕಂಡುಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಸಚಿವರೂ ಒಗ್ಗೂಡಿ ಯೋಜನಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
“ಭ್ರಷ್ಟಾಚಾರದ ಕಾರಣಗಳಿಂದ ಕಳೆದ ಸಾಲಿನಲ್ಲಿ ಶೇ.26ರಷ್ಟು ಅನುದಾನವನ್ನು ಬಳಸಿಕೊಳ್ಳಲು ಕೆಕೆಆರ್‌ಡಿಬಿಯಿಂದ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಕಾನೂನು ಮುರಿದು ಅಕ್ರಮಗಳಿಗೆ ಕಾರಣರಾದರೆಲ್ಲರನ್ನೂ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಬೇಕು” ಎಂದು ಯೋಜನಾ ಸಚಿವರಿಗೆ ಮನವಿ ಮಾಡಿದರು.
“ನಮ್ಮ ಭಾಗದ ನಾಯಕ ಮಲ್ಲಿಕಾರ್ಜುನ ಖರ್ಗೆ, ದಿ. ಧರಂ ಸಿಂಗ್ ಮುಂತಾದ ನಾಯಕರ ಅವಿರತ ಶ್ರಮದಿಂದ ಸಾಂವಿಧಾನಿಕ ತಿದ್ದುಪಡಿ ಮಾಡಿ 371(J) ಜಾರಿ ಮಾಡಲಾಯಿತು. ಆದರೆ ಕಳೆದ ನಾಲ್ಕು ವರ್ಷದಲ್ಲಿ ಕಾನೂನನ್ನು ನಿಯಮಗಳಿಗೆ ವಿರುದ್ಧವಾಗಿ ಸಡಿಲಗೊಳಿಸಿ ನಮ್ಮ ಭಾಗದ ಜನರಿಗೆ ಸಿಕ್ಕಿರುವ ಹಕ್ಕನ್ನು ಕಸಿದುಕೊಳ್ಳುವ ಕೆಲಸ ನಡೆಸಲಾಗಿತ್ತು” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಬಲವರ್ಧನೆಗೆ ಸರ್ಕಾರ ಬದ್ಧ: ಸಚಿವ ಬೋಸರಾಜು
“ಕೆಕೆಆರ್‌ಡಿಬಿಯನ್ನು ಮತ್ತೆ ಪ್ರಗತಿಯ ಹಾದಿಗೆ ತರಲು ನಮ್ಮ ಸಂಪೂರ್ಣ ಪ್ರಯತ್ನ ಜಾರಿಯಲ್ಲಿರಲಿದೆ. ಕಲ್ಯಾಣ ಕರ್ನಾಟಕದ ಹೆಸರಿಗೆ ತಕ್ಕಂತೆ ಅರ್ಥ ತರಲು ನಾವು ಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದರು.