ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ. ಯಾವುದೇ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಿದರೂ, ಲೂಟಿ ಮುಂದುವರೆಸಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಮೇಲಧಿಕಾರಿ ದೂರು ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಟಿ ಸಿದ್ದಪ್ಪ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತಿಯ ಅಧ್ಯಕ್ಷರು ಸಹಿ ಮಾಡಾಬೇಕಾದ ಪತ್ರ, ಬಿಲ್‌ಗಳಿಗೆ ತಾನೇ ಅಧ್ಯಕ್ಷರ ನಕಲಿ ಸಹಿ ಹಾಕಿ ಗುತ್ತಿಗೆದಾರರ ಹೆಸರಿಗೆ ಬಿಲ್ ಪಾವತಿಸಿದ್ದಾರೆ. ಆ ಹಣವನ್ನು ತಾವೇ ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೊಣ್ಣಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಾತ್ರವಲ್ಲದೆ, ಈ ಹಿಂದೆ ಕೆಲಸ ಮಾಡಿದ್ದ ಬಿಳಿಚೋಡು ಮತ್ತು ಬಸವನಕೋಟೆ ಗ್ರಾಮ ಪಂಚಾಯತಿಗಳನ್ನೂ ಭಾರೀ ಹಣವನ್ನು ಲೂಟಿ ಮಾಡಿದ್ದಾರೆ. ಈ ಎರಡೂ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 27 ಲಕ್ಷ ರೂ. ಹಣವನ್ನು ಸಿದ್ದಪ್ಪ ಲಪಟಾಯಿಸಿದ್ದಾರೆ. ಇದೀಗ, ಆ ಪಂಚಾಯತಿಗಳ ಪಿಡಿಒಗಳು ಈ ಬಗ್ಗೆ ವರದಿ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಎಲ್ಲ ಅಕ್ರಮಗಳು ಇದೀಗ ನಡೆಯುತ್ತಿರುವ ಗ್ರಾಮ ಪಂಚಾಯತಿ ಲೆಕ್ಕ ಪರಿಶೀಲನೆ ಪ್ರಕ್ರಿಯೆ ವೇಳೆ ಬೆಳಕಿಗೆ ಬಂದಿವೆ. ಸಿದ್ದಪ್ಪ ವಿರುದ್ಧ ಪಂಚಾಯತ್ ರಾಜ್ ಇಲಾಖೆ ಕೂಡಾ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.