ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿಜೆ ವ್ಯವಸ್ಥೆ, ಬೇಸ್ ಬೂಸ್ಟರ್, ಮೊಬೈಲ್ ಡಿಜೆ ವಾಹನಗಳು ಸೇರಿದಂತೆ 75 ಡೆಸಿಬೆಲ್ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಶಬ್ದವರ್ಧಕ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಆದೇಶ ಹೊರಡಿಸಿದ್ದಾರೆ.
ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮ) ನಿಯಮಗಳು, 2000 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ.ಎನ್.ಎಸ್.ಎಸ್), 2023ರ ಕಲಂ 163ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮತದಾರರ ವಿಶೇಷ ಪರಿಷ್ಕರಣೆ: 40,019 ಪ್ರಕರಣಗಳ ವಿಚಾರಣೆ ಬಾಕಿ
ವಸತಿ ಪ್ರದೇಶಗಳು, ಸೈಲೆಂಟ್ ಝೋನ್ಗಳು, ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯ ಪ್ರದೇಶಗಳು, ಇಳುವರಿ ರಸ್ತೆಗಳು, ಸಂಚಾರ ದಟ್ಟಣೆ ಇರುವ ಪ್ರದೇಶಗಳು ಹಾಗೂ ಸಮುದಾಯ ಸೂಕ್ಷ್ಮ ಪ್ರದೇಶಗಳಲ್ಲಿ ಡಿಜೆ ಮತ್ತು ಹೆಚ್ಚಿನ ಶಬ್ದ ಉಂಟುಮಾಡುವ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಅಲ್ಲದೆ, ಜಿಲ್ಲೆಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಡಿಜೆ ಸೇರಿದಂತೆ ಹೆಚ್ಚಿನ ಶಬ್ದದ ಸಾಧನಗಳ ಬಳಕೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಅಥವಾ ಆಚರಣೆಗಳನ್ನು ಆಯೋಜಿಸುವವರು ಅತ್ಯವಶ್ಯಕ ಸಂದರ್ಭಗಳಲ್ಲಿ ಮಾತ್ರ ಪೊಲೀಸ್ ಇಲಾಖೆಯಿಂದ ಪೂರ್ವ ಲಿಖಿತ ಅನುಮತಿ ಪಡೆದು, ಷರತ್ತುಬದ್ಧ ಹಾಗೂ ನಿಗದಿತ ಮಿತಿಯೊಳಗಿನ ಶಬ್ದ ವ್ಯವಸ್ಥೆಗಳನ್ನು ಬಳಸಬೇಕು.
ಶಬ್ದ ಮಾಲಿನ್ಯ ನಿಯಮಗಳನ್ನು ಪಾಲಿಸುವ ಕುರಿತು ಆಯೋಜಕರು ಲಿಖಿತ ಮುಚ್ಚಳಿಕೆ ಪತ್ರ ನೀಡುವುದು ಕಡ್ಡಾಯವಾಗಿದೆ. ಆದೇಶವನ್ನು ಉಲ್ಲಂಘಿಸಿ ಡಿಜೆ ಅಥವಾ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದವರ್ಧಕ ಸಾಧನಗಳನ್ನು ಬಳಸಿದಲ್ಲಿ, ಸಂಬಂಧಪಟ್ಟ ಕಾರ್ಯಕ್ರಮದ ಆಯೋಜಕರನ್ನೇ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಅವರು ಎಚ್ಚರಿಕೆ ನೀಡಿದ್ದಾರೆ.





