ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ–2026 (SIR) ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿನ ‘ನೋ ಮ್ಯಾಪಿಂಗ್’ ಹಾಗೂ ‘ಅನಾಮಲಿಸ್’ (ತಾರ್ಕಿಕ ವ್ಯತ್ಯಾಸ) ಪ್ರಕರಣಗಳ ಪರಿಶೀಲನೆ ಹಾಗೂ ವಿಚಾರಣೆ ಪ್ರಕ್ರಿಯೆ ಮುಂದುವರಿದಿದ್ದು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 40,019 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ.
ಮತದಾರರ ಪಟ್ಟಿಯಲ್ಲಿ ತಾರ್ಕಿಕ ವ್ಯತ್ಯಾಸ ಕಂಡುಬಂದಿರುವ ಮತದಾರರು ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್‌ಗಳನ್ನು ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 65,248 ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಈ ಪೈಕಿ 45,752 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ.
ಜಾರಿಗೊಂಡ ನೋಟಿಸ್‌ಗಳ ಪೈಕಿ 5,733 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಇನ್ನೂ 40,019 ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14,012 ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, 10,568 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ 1,630 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 8,938 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಡಿಕೆ ಬೆಳೆಗಾರರಿಗೆ ಎಲೆಚುಕ್ಕೆ, ಕೊಳೆರೋಗ ನಿಯಂತ್ರಣಕ್ಕೆ ಶೇ.60 ಸಹಾಯಧನ
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 10,446 ನೋಟಿಸ್‌ಗಳನ್ನು ಸೃಷ್ಟಿಸಿ, 7,522 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಇಲ್ಲಿ 1,143 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 6,379 ಪ್ರಕರಣಗಳು ಬಾಕಿ ಇವೆ. ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ 8,344 ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, 5,970 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ 831 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಇನ್ನೂ 5,139 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 13,660 ನೋಟಿಸ್‌ಗಳನ್ನು ಸೃಷ್ಟಿಸಿ, 7,598 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ 225 ಪ್ರಕರಣಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದ್ದು, 7,373 ಪ್ರಕರಣಗಳು ಬಾಕಿ ಉಳಿದಿವೆ. ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 8,821 ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, 6,269 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ 510 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 5,759 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 9,965 ನೋಟಿಸ್‌ಗಳನ್ನು ಸೃಷ್ಟಿಸಿ, 7,825 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಇಲ್ಲಿ 1,394 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 6,431 ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿ ಉಳಿದಿವೆ.
ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ–2026ರ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿನ ‘ನೋ ಮ್ಯಾಪಿಂಗ್’ ಮತ್ತು ‘ಅನಾಮಲಿಸ್’ ಪ್ರಕರಣಗಳನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಮುಂದುವರಿಯುವಂತೆ ಹಾಗೂ ವ್ಯತ್ಯಾಸ ಹೊಂದಿರುವ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸುವ ಕಾರ್ಯ ನಡೆಯುತ್ತಿದೆ. ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.





