ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಮತ್ತು ಈಗಾಗಲೇ ಗುರುತಿಸಲಾದ ಪಿ.ಆರ್.ರವರೊಂದಿಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʼಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವಂತೆ ರೈತರಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ವತಿಯಿಂದ ಗ್ರಾಮ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ಜುಲೈ 31 ರೊಳಗಾಗಿ ಬೆಳೆ ವಿಮೆ ಮಾಡಿಸಲು ರೈತರಿಗೆ ತಿಳಿಸಬೇಕುʼ ಎಂದರು.
ಭಾರಿ ಮಳೆಯಿಂದ ಬೆಳೆ ಹಾನಿ, ಮಾನವ ಹಾಗೂ ಪ್ರಾಣಿ ಜೀವ ಹಾನಿ, ಮನೆ ಹಾನಿ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ತಹಸೀಲ್ದಾರರು ಕೂಡಲೇ ನನ್ನ ಗಮನಕ್ಕೆ ತರಬೇಕು ಹಾಗೂ ರಸ್ತೆ, ಅಂಗನವಾಡಿ, ಶಾಲಾ ಕಟ್ಟಡಗಳು ಹಾಳಾಗಿದಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ʼಭಾರಿ ಮಳೆ ಸಂಭವಿಸುವ ಮುನ್ನಸೂಚನೆಯಿದ್ದಲ್ಲಿ ಮಾಂಜ್ರಾ ನದಿಯ ದಂಡೆಗೆ ಇರುವ ಗ್ರಾಮಗಳ ಜನರಿಗೆ ನದಿಯ ತಿರದಲ್ಲಿ ಹೋಗದಂತೆ ಸಂಬಂಧಪಟ್ಟ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಗ್ರಾಮಸ್ಥರಿಗೆ ತಿಳಿಸುವುದು. ಧನೆಗಾಂಗ,ಕಾರಂಜಾ ಡ್ಯಾಮ್‌ನಿಂದ ನೀರು ಹರಿಸಿದಲ್ಲಿ ನದಿ ತೀರದಲ್ಲಿ ಇರುವ ಗ್ರಾಮಗಳ ಮನೆಗಳಲ್ಲಿ ನೀರು ನುಗ್ಗುವ ಸಂಭವಿರುವ ಗ್ರಾಮದಲ್ಲಿ ಗ್ರಾಮಸ್ಥರಿಗೆ ಮುನ್ನೆಚರಿಕೆ ನೀಡಿ ಗಂಜಿ ಕೇಂದ್ರಗಳನ್ನು ಗುರುತಿಸಿ ಅಗತ್ಯವಿದ್ದಲ್ಲಿ ಗ್ರಾಮಸ್ಥರಿಗೆ ಸ್ಥಳಾಂತರಿಸಲು ತಹಸೀಲ್ದಾರರು ಕ್ರಮವಹಿಸಬೇಕುʼ ಎಂದು ಹೇಳಿದರು.
ʼಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಮತ್ತು ಕೆರೆಗಳಲ್ಲಿ ಸಾರ್ವಜನಿಕರು ನೀರಿನಲ್ಲಿ ಈಜುವುದನ್ನು ನಿಷೇಧಿಸಿರುವ ಕುರಿತು ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸುವುದು ಮತ್ತು ಭಾರಿ ಮಳೆ ಸಂಭವಿಸಿದ್ದಲ್ಲಿ ಸಾರ್ವಜನಿಕರು ಜಲಾಶಯ ಮತ್ತು ಕೆರೆಗಳು ವೀಕ್ಷಿಸಲು ಹೋಗದಂತೆ ಕೆಎನ್‌ಎನ್‌ಎನ್‌ಎಲ್ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕ್ರಮ ವಹಿಸಬೇಕುʼ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಒ ಡಾ. ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ. ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕ ಸಲೀಂ ಪಾಶಾ ಸೇರಿದಂತೆ ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.