ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೆ.ಬೆಳಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬಯಲೇ ಗತಿ ಎಂಬಂತಾಗಿದೆ.
ʼಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಕೆ.ಬೆಳಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಆದರ್ಶ)ಯ ಮಕ್ಕಳಿಗೆ ಅಗತ್ಯವಾಗಿರುವ ಮೂಲ ಸೌಕರ್ಯ ಒದಗಿಸುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಫಲವಾಗಿದೆ. ಇದರಿಂದ ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗುತ್ತಿದೆʼ ಎಂದು ಪೋಷಕರು ದೂರಿದರು.
ಶಾಲೆಯ ಓದುವ ಮಕ್ಕಳಿಗೆ ಸುಸ್ಸಜಿತ ಕಟ್ಟಡ ಹೊಂದಿದೆ. ಆದರೆ ಶೌಚಾಲಯ ಇದ್ದರೂ ಅಲ್ಲಿ ನೀರಿನ ವ್ಯವಸ್ಥೆ, ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿದೆ. ಶೌಚಾಲಯ ಸುತ್ತಮುತ್ತಲೂ ಗಿಡ ಗಂಟಿ ಬೆಳೆದಿರುವ ಕಾರಣ ವಿದ್ಯಾರ್ಥಿನಿಯರು ಶೌಚಾಲಯ ಬಳಕೆಗೆ ಹಿಂಜರಿಯುತ್ತಿದ್ದಾರೆ.

ʼಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯ ಇದ್ದರೂ ಅದು ಸಮಪರ್ಕವಾಗಿ ನಿರ್ವಹಣೆಯಿಲ್ಲದ ಕಾರಣಕ್ಕೆ ಬಯಲಿಗೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಶೌಚಾಲಯ ಸುತ್ತಲೂ ಹುಲ್ಲು, ಮುಳ್ಳು ಬೆಳೆದಿದ್ದು ವಿದ್ಯಾರ್ಥಿಗಳಿಗೆ ಭೀತಿ ಕಾಡುತ್ತಿದೆ. ಬಯಲಿಗೆ ಹೋದರೆ ರಸ್ತೆ ಅಪಘಾತ ಸಂಭವಿಸುವ ಸಾಧ್ಯತೆ ಇದೆʼ ಎಂದು ಸ್ಥಳೀಯರಾದ ಸಿಂಗ್ಲಿ ನಾಗರಾಜ್, ವೀರೇಶ್ ಯಾದವ್, ಭೀಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಹಿಂದೂ-ಮುಸ್ಲಿಮರು ಶತ್ರುಗಳಲ್ಲ : ಅಕ್ಬರ್ ಅಲಿ
ನಾನು ಹೊಸದಾಗಿ ಶಾಲೆಗೆ ಬಂದಿರುವೆ, ಶಾಲೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಕೂಡಲೇ ಅವುಗಳನ್ನು ಸರಿಪಡಿಸಿ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಹೇಳಿದರು.
ವರದಿ : ರಾಧಾಕೃಷ್ಣ
