ನಾಟಕಗಳು ಮನುಷ್ಯನನ್ನು ಸದಾ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತವೆ. ಭಾಷೆ, ಅಭಿನಯ, ಗಾಯನ ಎಲ್ಲವನ್ನು ಒಳಗೊಂಡ ನಾಟಕಗಳು, ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿವೆ ಎಂದು ಹಿರಿಯ ನಟ ಡಾ. ಸುಂದರ್ ರಾಜ್ ಹೇಳಿದ್ದಾರೆ.
ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. “ಆಧುನಿಕ ಯುಗದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳಿಗೆ ಪ್ರೇಕ್ಷಕರನ್ನು ಕರೆತರುವುದು ಒಂದು ಸವಾಲಿನ ಕೆಲಸವಾಗಿದೆ. ಆದರೆ, ತುಮಕೂರಿನಲ್ಲಿ ಪ್ರತಿ ಶನಿವಾರ, ಭಾನುವಾರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ, ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಇದರ ಹಿಂದಿನ ಶಕ್ತಿ ನಾಟಕರತ್ನ ಗುಬ್ಬಿ ವೀರಣ್ಣ” ಎಂದರು.
“1986-87ರಲ್ಲಿ ನಮಗೆ ಚಲನಚಿತ್ರದಲ್ಲಿ ಅವಕಾಶಗಳು ಕಡಿಮೆಯಾದಾಗ ತುಮಕೂರಿನ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಚನ್ನಬಸವೇಶ್ವರ ನಾಟಕ ಕಂಪನಿಗೆ ಬಂದು ಬಣ್ಣಹಚ್ಚಿ, ಪಾತ್ರ ಮಾಡಿದ್ದೆವು. ಅದರಿಂದ ಬಂದ ಹಣದಿಂದ ನಾನು ಮತ್ತು ನನ್ನ ಪತ್ನಿ ಜೀವನ ನಡೆಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ರಂಗಭೂಮಿ ಮಾತ್ರವಲ್ಲ, ಸಿನಿಮಾಗಳು ಸಹ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಮೊದಲಿದ್ದ 500-600 ಜನ ಕುಳಿತು ನೋಡಬಹುದಾದ ಥಿಯೇಟರ್‌ಗಳು, ಇಂದು ಕೇವಲ 35-40 ಜನ ಕುಳಿತು ನೋಡುವಷ್ಟು ಕಿರಿದಾಗುತ್ತಿವೆ. ನಾಟಕ ಕ್ಷೇತ್ರ ಸರ್ವಕಾಲಿಕವಾದುದ್ದು, ಜಾಗತಿಕವಾಗಿ ಏನೆಲ್ಲ ನಡೆಯುತ್ತಿದೆ. ಜೀವ ನೀಡುವ ಶಕ್ತಿ ಇಲ್ಲದ ಮನುಷ್ಯ, ಮತ್ತೊಬ್ಬರ ಜೀವ ತೆಗೆಯುವ ಕೆಲಸ ಮಾಡುತಿದ್ದಾನೆ. ಪ್ರಾಣಿಗಳನ್ನು ನೋಡಿ ನಾವು ಕಲಿಯಬೇಕಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ತುಮಕೂರು ದಸರಾ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ಪರಮೇಶ್ ಮಾತನಾಡಿ, “ಇದೇ ಮೊದಲ ಬಾರಿಗೆ ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ನಾಟಕ ಸ್ಪರ್ಧೆಗಳನ್ನು ನಡೆಸಲು, ಕಳೆದ ಮೂರು ತಿಂಗಳಿನಿಂದ ತಯಾರಿ ನಡೆಸಲಾಗಿದೆ. ಹಲವಾರು ಜನರು ಇದಕ್ಕಾಗಿ ದುಡಿದ್ದಾರೆ. ನಿರೀಕ್ಷೆಗೂ ಮೀರಿ ನೊಂದಣಿಗಳು ಬಂದರೂ ಮೊದಲು ನೊಂದಣಿಯಾದ ಸುಮಾರು 16 ತಂಡಗಳಿಗೆ ಇಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಅಕ್ಟೋಬರ್ 21ರಿಂದ 24ರವರೆಗೆ ಹೈಸ್ಕೂಲ್ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ದಸರ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳಬೇಕು” ಎಂದು ಮನವಿ ಮಾಡಿದರು.
ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ, ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸತ್ಯಮಂಗಲ ಸದಾಶಿವಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ರುದ್ರೇಶ್, ಸತ್ಯಮಂಗಲ ಜಗದೀಶ್, ಅನಿರುದ್, ಹನುಮಂತರಾಜು, ರೇಖಾ ಶಿವಕುಮಾರ್, ವಿರೂಪಾಕ್ಷಪ್ಪ, ನಯಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.