ದೇಶದಲ್ಲಿ ಶೋಷಕ ಬಂಡವಾಳಶಾಹಿ ವರ್ಗ ಹಾಗೂ ಶೋಷಿತ ಕಾರ್ಮಿಕ ವರ್ಗಗಳು ಅಸ್ತಿತ್ವದಲ್ಲಿರುವುದನ್ನು ಯಾರೂ ಮರೆಮಾಚಲಾಗದು. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್, ಬಿಜೆಪಿ ಸೇರಿದಂತೆ ದೇಶವನ್ನಾಳಿದ ಎಲ್ಲ ಪಕ್ಷಗಳು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಲು ಅವರ ಪರವಾದ ನೀತಿಗಳನ್ನು ರೂಪಿಸಿವೆ. ದೇಶದ ಬಹುಸಂಖ್ಯಾತ ದುಡಿಯುವ ಜನರ ಬದುಕನ್ನು ಬೀದಿಗೆ ತಂದಿವೆ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಕೇಂದ್ರ ಪಾಲಿಟ್ ಬ್ಯೂರೋ ಸದಸ್ಯ ಕೆ ರಾಧಾಕೃಷ್ಣ ಆರೋಪಿಸಿದ್ದಾರೆ.
ಎಸ್‌ಯುಸಿಐ ಸಂಸ್ಥಾಪಕ ಶಿವದಾಸ್ ಘೋಷ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಧಾರವಾಡದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ರಾಧಾಕೃಷ್ಣ ಮಾತನಾಡಿದರು. “ಸ್ವಾತಂತ್ರ್ಯ ಸಂದರ್ಭದಲ್ಲಿ ಕೆಲವು ಕೋಟಿಗಳಿದ್ದ ಬಂಡವಾಳಗಾರರ ಸಂಪತ್ತು, ಇಂದು ಲಕ್ಷಾಂತರ ಕೋಟಿ ದಾಟಲು ದೇಶವನ್ನಾಳಿದ ಪಕ್ಷಗಳು ರೂಪಿಸಿದ ನೀತಿಗಳೇ ಕಾರಣ. ಈ ಸತ್ಯವನ್ನು ಎಲ್ಲಿಯವರೆಗೆ ದುಡಿಯುವ ವರ್ಗ ಗ್ರಹಿಸುವುದಿಲ್ಲವೋ ಹಾಗೂ ಚುನಾವಣಾ ಭ್ರಮೆಯಲ್ಲಿ ಮುಳುಗಿರುತ್ತಾರೋ ಅಲ್ಲಿಯವರೆಗೆ ಸಮಾಜವಾದಿ ಕ್ರಾಂತಿಯನ್ನು ಸಾಧಿಸಲು ಸಾದ್ಯವಿಲ್ಲ” ಎಂದರು.
“ದುಡಿಯುವ ಜನರು ತಮ್ಮ ದಿನನಿತ್ಯದ ಬೇಡಿಕೆಗಳನ್ನು ಈಡೇರಿಸಲು ಪ್ರಜಾತಾಂತ್ರಿಕ ಚಳುವಳಿಗಳನ್ನು ಬೆಳೆಸುತ್ತ, ವರ್ಗ ಸಂಘರ್ಷವನ್ನು ತೀವ್ರಗೊಳಿಸುತ್ತ, ಅಂತಿಮವಾಗಿ ಶೋಷಣಾರಹಿತ ಸಮಾಜವಾದಿ ವ್ಯವಸ್ಥೆಗೆ ಜನ್ಮ ನೀಡಲು ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಬೇಕಾಗುತ್ತದೆ. ದೇಶದ ದುಡಿಯುವ ವರ್ಗ, ವಿಮೋಚನೆಯ ಮಾರ್ಗ ತೋರಿಸಿದ ಶಿವದಾಸ್ ಘೋಷ್ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಹೋರಾಟ ರೂಪಿಸಬೇಕು” ಎಂದು ಕರೆ ಕೊಟ್ಟರು.
ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, “ಪಶ್ಚಿಮ ಬಂಗಾಳದ ಒಂದು ಪುಟ್ಟ ಜಿಲ್ಲೆಯಲ್ಲಿ ಕೆಲವೇ ಸಂಗಾತಿಗಳೊಂದಿಗೆ ಶಿವದಾಸ್ ಘೋಷ್ ಅವರು ಪ್ರಾರಂಭಿಸಿದ ಪಕ್ಷ, ಇಂದು 27 ರಾಜ್ಯಗಳಲ್ಲಿ ಹೋರಾಟಗಳನ್ನು ಬೆಳೆಸುತ್ತಿದೆ. ದೇಶದಲ್ಲಿ ಬಂಡವಾಳಶಾಹಿ ವರ್ಗ ತನ್ನ ಹಿತಾಸಕ್ತಿಯನ್ನು ಕಾಪಾಡಲು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವಾರು ಪಕ್ಷಗಳನ್ನು ಪೋಷಿಸುತ್ತಾ ಬಂದಿದೆ. ಅದೇ ರೀತಿ ದುಡಿಯುವ ವರ್ಗ ತನ್ನ ವಿಮೋಚನೆಗಾಗಿ ನೈಜ ಕಮ್ಯುನಿಸ್ಟ್ ಪಕ್ಷವನ್ನು ಬಲಪಡಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ, ಜಿಲ್ಲಾ ಸಮಿತಿ ಸೆಕ್ರೆಟ್ರಿಯೇಟ್ ಸದಸ್ಯ ಗಂಗಾಧರ ಬಡಿಗೇರ ಹಾಗೂ ಪಕ್ಷದ ಹಲವಾರು ಕಾರ್ಯಕರ್ತರು ಇದ್ದರು.