ಸಮ ಸಮಾಜಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಗಸ್ಟ್ 28ರಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಟ ಅಹಿಂಸಾ ಚೇತನ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಯಾವುದೇ ಅಧಿಕಾರಕ್ಕಾಗಿ ಅಲ್ಲ. ಒಂದು ಉತ್ತಮ ಸಮಾಜದ ಪರಿಕಲ್ಪನೆಗಾಗಿ, ಅನ್ಯಾಯದ ವಿರುದ್ಧ ಮಾಡುತ್ತಿರುವ ಹೋರಾಟ ಎಂದರು.
ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ಕಾಂಗ್ರೆಸ್ ಅಳಿಸಿ, ದಲಿತರನ್ನು ಉಳಿಸಿ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯನವರು ನಾನೊಬ್ಬ ಬಸವ, ಅಂಬೇಡ್ಕರ್ ಅನುಯಾಯಿ ಎಂದು ಹೇಳುತ್ತಾರೆ. ಆದರೆ ಅವರ ನಡವಳಿಕೆ, ಅವರ ಯೋಜನೆಗಳು ದಲಿತ ವಿರೋಧಿ, ಬಡವರ ವಿರೋಧಿಯಾಗಿವೆ. ಇದು ಕೇವಲ ಅಧಿಕಾರ ಮತ್ತು ಹಣದ ದಾಹಕ್ಕಾಗಿ ಮಾಡುತ್ತಿರುವ ಯೋಜನೆಗಳು ಎಂದು ಕಿಡಿಕಾರಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಲಿತ ವಿರೋಧಿ ನಡೆಯನ್ನು ಅನುಸರಿಸುತ್ತಿದೆ. ದಲಿತರಿಗಾಗಿ ಮೀಸಲಿರುವ ಕೋಟ್ಯಾಂತರ ರೂಪಾಯಿ ಎಸ್ಸಿಪಿ – ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ದುರ್ಬಳಕೆ ಮಾಡಿದ್ದಾರೆ. ಕೋರ್ಟ್ ಆದೇಶ ನೀಡಿದರೂ, ಸದಾಶಿವ ವರದಿಯಂತೆ ಒಳಮೀಸಲಾತಿ ಜಾರಿಗೆ ತರದೆ ಬಣ್ಣ ಬಣ್ಣದ ಮಾತುಗಳನ್ನಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೈಕೋರ್ಟ್ ವಕೀಲ, ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ಹರಿರಾಂ ಮಾತನಾಡಿ, ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಇದರಿಂದ ಶೇ.67ರಷ್ಟು ದಲಿತರು ಮತ ನೀಡಿದರು. ಸುಮಾರು 95ರಷ್ಟು ಮುಸ್ಲಿಮರ ಮತ ನೀಡಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆಯಲು ಕಾರಣವಾದರು. ಗೆದ್ದ ಬಳಿಕ ಒಂದು ವರ್ಷ ಸಮಯ ಕೊಟ್ಟಿದ್ದೇವೆ. ಆದರೂ ಯಾವುದೇ ಯೋಜನೆ ತರಲಿಲ್ಲ. ಇರುವ ಯೋಜನೆಗಳನ್ನು ನಾಶ ಮಾಡುವ, ಕಡಿತ ಮಾಡುವ ಕೆಲಸ ಮಾಡಿದ್ದಾರೆ. ಸುಮಾರು 25ಸಾವಿರ ಕೋಟೆ ದಲಿತರ ಹಣವನ್ನ ದುರ್ಬಳಕೆ ಮಾಡಿಕೊಂಡು, ದಲಿತರ ಹಣ ಕದ್ದಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಮೇಲೆ ಮೊದಲಿಗೆ ನಂಬಿಕೆ ಇತ್ತು. ಆದರೆ ಅವರು ದಲಿತರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದರು. ರಾಜ್ಯದಲ್ಲಿ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅಟ್ರಾಸಿಟಿ ಪ್ರಕರಣಗಳು ದಾಖಲಾಗುತ್ತಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕ್ಷೇತ್ರದಲ್ಲಿ ದಲಿತರ ಕೈ ಕತ್ತರಿಸಲಾಯಿತು. ಮೊನ್ನೆಯಷ್ಟೇ ಕ್ಷೌರಿಕನೊಬ್ಬ ದಲಿತನಿಗೆ ಕ್ಷೌರ ಮಾಡುವ ವಿಚಾರಕ್ಕಾಗಿ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ರಾಜ್ಯದಲ್ಲಿ ಅನ್ಯಾಯದ ವಿರುದ್ಧ ಸಮಯಕ್ಕೆ ಸರಿಯಾಗಿ ಎಫ್.ಐ.ಆರ್ ದಾಖಲಾಗುತ್ತಿಲ್ಲ. ದಲಿತರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಳಮೀಸಲಾತಿ ಸಾಂವಿಧಾನಿಕವಾಗಿದೆ. ಕೆನೆಪದರ ಮಾಡಲೇಬೇಕು ಎಂದು ಆದೇಶದಲ್ಲಿ ಎಲ್ಲೂ ಹೇಳಿಲ್ಲ. ಆದರೂ ಸಿದ್ದರಾಮಯ್ಯ ಅವರು ನ್ಯಾಯಾಲಯದ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದ್ದಾರೆ. ದಲಿತಪರ ಆದವರು ನ್ಯಾಯಾಲಯದ ಒಪ್ಪಿಗೆ ಪಡೆಯುತ್ತಿರುವುದು ಸರಿಯಾದ ಕ್ರಮವಲ್ಲ್ ಶೀಘ್ರವೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಕಾಲರ್‌ಶಿಪ್ ವೇಸ್ಟ್ ಆಫ್ ಮನಿ : ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಸ್ಕಾಲರ್ ಶಿಪ್ ಬಗ್ಗೆ ಹೇಳಿದಾಗ, ಅದು ವೇಸ್ಟ್ ಆಫ ಮನಿ ಎಂದಿದ್ದಾರೆ. ಮಹದೇವಪ್ಪ ಅವರಿಗೆ ಸ್ಕಾಲರ್ ಶಿಪ್ ರದ್ದು ಮಾಡಿರುವ ವಿಚಾರವೇ ಗೊತ್ತಿಲ್ಲ ಎಂದೇಳುತ್ತಿದ್ದಾರೆ. ಅಧಿಕಾರಿಗಳು ಮಂತ್ರಿಗೆ ಗೊತ್ತಿಲ್ಲದೆ ಯೋಜನೆ ರದ್ದು ಮಾಡುತ್ತಿದ್ದಾರೆಯೇ?. ಒಬ್ಬ ಮಂತ್ರಿಗೆ ವಿಚಾರ ಗೊತ್ತಿಲ್ಲ ಎಂದರೆ ಹೇಗೆ ಎಂದು ಕುಟುಕಿದರು.
ರಾಜ್ಯದಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಯಾಕೆ ಭರ್ತಿ ಮಾಡುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರಕಾರ್ಮಿಕರಿಗೆ ಖಾಯಂ ಹುದ್ದೆ ಎಂದಿದ್ದರು. ಆದರೆ, ಇದೀಗ ಖಾಯಂ ಮಾಡದೆ ಪೌರಕಾರ್ಮಿಕರಿಗೆ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಪೌರಕಾರ್ಮಿಕರು ನಿತ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಕೆಂಡಕಾರಿದರು.
ಕಾಂಗ್ರೆಸ್‌ನವರು ತಪ್ಪುಗಳಾದಾಗ ಬೊಗುಳುತ್ತಿದ್ದಾರೆ, ದೌರ್ಜನ್ಯಗಳಾದಾಗ ಕಚ್ಚುತ್ತಾರೆ ಎಂದು ಜನ ನಂಬಿದ್ದರು. ಆದರೆ, ಕಾಂಗ್ರೆಸ್ ನವರು ಬೊಗಳುವ ನಾಯಿಗಳೂ ಆಗುತ್ತಿಲ್ಲ. ಇತ್ತ ಕಚ್ಚುವ ಶಕ್ತಿಯನ್ನೂ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಕೆಲ ದಲಿತ ನಾಯಕರು ಸಿದ್ದರಾಮಯ್ಯ ಪರ ನಿಂತಿದ್ದಾರೆ. ದಲಿತರಿಗೆ ಅನ್ಯಾಯವಾಗುತ್ತಿರುವಾಗ ಕಾಂಗ್ರೆಸ್ ಉಳಿಸಲು ಹೊರಟಿರುವುದು ನಾಚಿಕೆಯ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ದಲಿತ ರಾಮಯ್ಯ ಅಲ್ಲ, ಬಲಿತ ರಾಮಯ್ಯ : ಚುನಾವಣೆಗೂ ಮುನ್ನ ದಲಿತ ರಾಮಯ್ಯ ಆಗಿದ್ದವರು, ಇದೀಗ ಚುನಾವಣೆ ಬಳಿಕ ಬಲಿತ ರಾಮಯ್ಯ ಆಗಿದ್ದಾರೆ. ದಲಿತ ರಾಮಯ್ಯ ಲೂಟಿ ರಾಮಯ್ಯ ಆಗಿ ಬದಲಾಗಿದ್ದಾರೆ. ಚುನಾವಣೆ ಮುಗಿದ ಮೇಲೆ ದಲಿತರ ರಕ್ಷಕರಾಗುವ ಬದಲು ಭಕ್ಷಕರಾಗಿದ್ದಾರೆ. ದಲಿತರಿಗೆ ಅನ್ಯಾಯ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಅಳಿಸಿ, ದಲಿತರನ್ನು ಉಳಿಸಿ ಪ್ರತಿಭಟನೆಗೆ ಎಲ್ಲ ದಲಿತಪರ, ಜನಪರ ಸಂಘಟನೆಗಳು ಸಾಥ್ ಕೊಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಮೋಹನ್ ದಾಸರಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮುಡಾ ಅಕ್ರಮ | ಸಿಎಂ ಅರ್ಜಿಗಳನ್ನು ವಿಚಾರಣೆ ನಡೆಸದಂತೆ ಸೂಚಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಸುದ್ದಿಗೋಷ್ಠಿಯಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದ ಶಂಕರ್ ರಾಮಲಿಂಗಯ್ಯ, ನಾಗೇಶ್, ಜನಾರ್ಧನ ಹಾಗೂ ಇತರರಿದ್ದರು.