- ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಚರ್ಚೆ ಸಾಧ್ಯತೆ
- ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಒತ್ತು
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಜು.27ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಬೆಂಗಳೂರಿನ ಏಟ್ರಿಯಾ ಹೋಟೆಲ್‌ನಲ್ಲಿ ಸಂಜೆ 6ಗಂಟೆಗೆ ನಡೆಯಲಿದೆ.
ಈ ಸಭೆಯಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಾಮರ್ಶೆ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸೇರಿದಂತೆ ಪಕ್ಷದೊಳಗಿನ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.
ಹಾಗೆಯೇ ಬಜೆಟ್ ಅಧಿವೇಶನದಲ್ಲಿ ನಡೆದ ಚರ್ಚೆ, ಆಡಳಿತ ಪಕ್ಷದ ವಿರುದ್ಧದ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಕಾರ್ಯತಂತ್ರ, ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಸೇರಿದಂತೆ ಇತರ ಸಂಗತಿಗಳು ಚರ್ಚೆಗೆ ಬರಲಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಯಿಸ್ಟ್ ಬೊಮ್ಮಾಯಿ, ಬೊಂಬೆ ಬೊಮ್ಮಾಯಿ ಮತ್ತು ಬಿಜೆಪಿ
ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಜು.19ರ ಸಂಜೆ 6.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ಆದರೆ, ಅದೇ ದಿನ ಸಚಿವರ ಜೊತೆ ಎಐಸಿಸಿ ಮುಖಂಡ ರಾಹುಲ್ ಸಭೆ ನಡೆಸಲಿದ್ದಾರೆಂಬ ಕಾರಣಕ್ಕೆ ಸಿಎಲ್‌ಪಿ ಸಭೆ ಮುಂದೂಡಲಾಗಿತ್ತು.
ಈ ನಡುವೆ ಜು.17 ಮತ್ತು 18ರಂದು ಬೆಂಗಳೂರಿನಲ್ಲಿ ನಡೆದ 26 ವಿರೋಧ ಪಕ್ಷಗಳ ಸಭೆಗೆ ಸೋನಿಯಾ ಗಾಂಧಿ ಜೊತೆ ಬಂದಿದ್ದ ರಾಹುಲ್ ಗಾಂಧಿ ಅವರು, ಜು.18ರ ರಾತ್ರಿಯೇ ದಿಲ್ಲಿಗೆ ಹಿಂದಿರುಗಿದ್ದರು. ಹೀಗಾಗಿ, ಸಚಿವರೊಂದಿಗಿನ ಸಭೆ ರದ್ದಾಗಿತ್ತು.