ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ದೇಶನದಂತೆ ಮತ್ತೊಂದು ಏಕಸದಸ್ಯ ಸಮಿತಿ ರಚಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಉಪಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಹೇಳಿದರು.
ಬುಧವಾರ ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೆ ನಿರ್ಧರಿಸಿ ಏಕ ಸದಸ್ಯ ಸಮಿತಿ ರಚಿಸಿರುವುದು ವಿಳಂಬ ಮಾಡುವ ದುರುದ್ದೇಶವಿದೆ. ಸಚಿವ ಸಂಪುಟ ಸಭೆಯಂತೆ ಛಲವಾದಿ ಸಮುದಾಯದ ಸಚಿವರುಗಳು ಸರ್ಕಾರದ ಮೇಲೆ ಒತ್ತಡ ಹಾಕುವ ತಂತ್ರ ನಡೆಸಿದ್ದರು. ಒಲ್ಲದ ಮನಸ್ಸಿನಿಂದಲೇ ಸಿದ್ದರಾಮಯ್ಯನವರು ಹೈಕೋರ್ಟ್ ನ್ಯಾಯಮೂರ್ತಿ ಮತ್ತೊಂದು ಸಮಿತಿ ರಚಿಸಿ ಉಪ ಚುನಾವಣೆಯಲ್ಲಿ ಮಾದಿಗ ಸಮದಾಯ ಓಟು ಪಡೆಯುವ ದುರುದ್ದೇಶ ಹೊಂದಿದ್ದಾರೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಡಾ.ಪರಮೇಶ್ವರ ಇವರು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಜಾರಿಗೆ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿದ್ದರು. ಮಾದಿಗ ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಮಾದಿಗರಿಗೆ ನಿಧಾನದ್ರೋಹ ಮಾಡುವ ಹುನ್ನಾರ ನಡೆಸಿದೆ. ಮೂರು ತಿಂಗಳಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ. ಸದಾಶಿವ ಆಯೋಗ ನೀಡಿರುವ ದತ್ತಾಂಶ ಸಿದ್ಧವಾಗಿದ್ದರೂ ಕಾಲಹರಣ ಮಾಡಲು ಏಕಸದಸ್ಯ ಸಮಿತಿ ರಚಿಸಲಾಗಿದೆ. ಸಂಡೂರು, ಶಿಗ್ಗಾಂವ್ ಮತ್ತು ಚನ್ನಪಟ್ಟಣದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲ್ಲಿಸಲು ಸಮದಾಯದ ಜನರಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಒಳಮೀಸಲಾತಿ ನಾನೇ ಜಾರಿ ಮಾಡುವುದಾಗಿ ಹೇಳುತ್ತಾ ಬಂದಿದ್ದಾರೆಯೇ ಹೊರತು ಸ್ವಪಕ್ಷೀಯರಿಂದ ಇರುವ ಒತ್ತಡವನ್ನು ಬಹಿರಂಗಪಡಿಸಿಲ್ಲ. ಅದನ್ನು ಬಹಿರಂಗಪಡಿಸಬೆಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ಜಾರಿಯಾಗುವವರೆಗೆ ನೇಮಕಾತಿ ತಡೆಯುವುದಾಗಿ ಸರಕಾರ ಹೇಳಿದ್ದರೂ ಈಗಾಗಲೇ ನೋಟಿಫಿಕೇಶನ್ ಆಗಿರುವ ಹುದ್ದೆಗಳನ್ನು ಮತ್ತೊಂಡು ಕಡೆಯಿಂದ ನೇಮಕಾತಿ ಮುಂದುವರಿಸಿರುವುದು ಸಮುದಾಯಕ್ಕೆ ಮಾಡಿರುವ ವಂಚನೆಯಾಗಿದೆ. ಕಾಂಗ್ರೆಸ್ ಪ್ರಾರಂಭದಿಂದಲೂ ಒಳಮೀಸಲಾತಿಗೆ ಸಹಕರಿಸುತ್ತಿಲ್ಲ. ಸರಕಾರ ಕೇವಲ ಭರವಸೆಯನ್ನಾಗಿ ನೀಡಿ, ಸಮುದಾಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸಮುದಾಯದ ಜನರು ಎಚ್ಚರಗೊಂಡು ಕಾಂಗ್ರೆಸ್ ತಕ್ಕ ಉತ್ತರ ನೀಡಬೇಕೆಂದು ನರಸಪ್ಪ ದಂಡೋರ ಮನವಿ ಮಾಡಿದರು.
ಇದನ್ನು ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆಗಳಿಗೆ ತಕ್ಷಣ ಶಿಕ್ಷಕರನ್ನು ನೇಮಿಸಲು ಎಸ್ಎಫ್‌ಐ ಒತ್ತಾಯ
ಈ ಸಂದರ್ಭದಲ್ಲಿ ಮಾದಿಗ ದಂಡೋರ ಸಮಿತಿಯ ರಾಯಚೂರು ಜಿಲ್ಲಾಧ್ಯಕ್ಷ ಮಾನಪ್ಪ, ಮೇಸ್ತಿ ದುಳ್ಳಯ್ಯ ಗುಂಜಹಳ್ಳಿ, ರಂಜಿತ ದಂಡೋರ, ನರಸಿಂಹಲು ಗಾಜರಾಳ, ಯಲ್ಲಪ್ಪ ರಾಂಪೂರು, ಹನುಮಂತ ಜುಮಲಗೇರಾ, ದಾವೀದ್ ಮರ್ಚಟ್ಹಾಳ, ನರಸಿಂಹಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.
