ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ನಡೆಯನ್ನು ಖಂಡಿಸಿ ಭಾನುವಾರ ಹುಮನಾಬಾದ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅಂಜುಂ ತಬಸುಮ್ ಅವರಿಗೆ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಮಾಜಿ ಸಚಿವ ರಾಜಶೇಖರ ಬಿ.ಪಾಟೀಲ್ ಮಾತನಾಡಿ, ‘ಸಾಮಾಜಿಕ ನ್ಯಾಯ ಎತ್ತಿ ಹಿಡಿದು ಜನಪರ ಸರ್ಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರು ನೇರವಾಗಿ ಯಾವುದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ ಖಾಸಗಿ ದೂರು ಆಧರಿಸಿ ಮುಡಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ನಿರ್ಣಯ ಚುನಾಯಿತ ಸರ್ಕಾರ ಅಭದ್ರಗೊಳಿಸುವ ಷಡ್ಯಂತ್ರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ-ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಷಡ್ಯಂತ್ರ ರೂಪಿಸಿ ಉತ್ತರಾಖಂಡ, ಜಾರ್ಖಂಡ್, ನವದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಸರ್ಕಾರದ ವಿರುದ್ಧ ಪಿತೂರಿ ನಡೆಯುತ್ತಿದೆ. ಮೇಲ್ನೋಟಕ್ಕೆ ಮುಖ್ಯಮಂತ್ರಿಗಳ ಮೇಲೆ ಯಾವುದೇ ಪ್ರಕರಣವಿಲ್ಲ, ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದ್ದು, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು’ ಎಂದರು.
ʼಸಿಎಂ ವಿರುದ್ಧ ದೂರು ಬಂದ ದಿನವೇ ಶೋಕಾಸ್ ನೋಟೀಸ್ ನೀಡಲಾಗಿತ್ತು. ರಾಜ್ಯಪಾಲರ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ನಮ್ಮ ಪಕ್ಷದ ಎಲ್ಲ ಶಾಸಕರು, ಸಂಪುಟ ಸಚಿವರು, ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳ ಪರವಾಗಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇದು ರಾಜಕೀಯ ಪಿತೂರಿ’ ಎಂದು ಕಿಡಿಕಾರಿದರು.
ʼರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಅವರಿಗೆ ಸಹಿಸಲಾಗುತ್ತಿಲ್ಲ .ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧವಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ಪಕ್ಷಪಾತ ವರ್ತನೆ ತೋರುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯ ಉಳಿಸಬೇಕು’ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವೈದ್ಯೆ ಅತ್ಯಾಚಾರ-ಕೊಲೆ : ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ , ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವೀರಣ್ಣ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ, ಕೆಎಂಎಫ್ ನಿರ್ದಶಕ ರೇವಣಸಿದ್ದಪ್ಪ ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಅಹಿಂದ, ದಲಿತ ಪರ ಸಂಘಟನೆಗಳು ಮುಖಂಡರು ಉಪಸ್ಥಿತರಿದ್ದರು.