ಬಾಗೇಪಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ಮೂಲಕ ಜಯಭೇರಿ ಸಾಧಿಸಿತು. ಅಧ್ಯಕ್ಷರಾಗಿ 23ನೇ ವಾರ್ಡಿನ ಸದಸ್ಯ ಎ.ಶ್ರೀನಿವಾಸ್, ಉಪಾಧ್ಯಕ್ಷರಾಗಿ 8ನೇ ವಾರ್ಡಿನ ಸದಸ್ಯೆ ಸುಜಾತ ನರಸಿಂಹನಾಯ್ಡು ಅವಿರೋಧ ಅಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಎ.ಶ್ರೀನಿವಾಸ್, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಸುಜಾತ ನರಸಿಂಹನಾಯ್ಡು ನಾಮಪತ್ರ ಸಲ್ಲಿಸಿದ್ದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಬಾಗೇಪಲ್ಲಿ ಪಟ್ಟಣ ಅಭಿವೃದ್ದಿ ದೃಷ್ಠಿಯಿಂದ ನಮ್ಮ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪಟ್ಟಣದ ಎಲ್ಲಾ ವಾರ್ಡ್‌ಗಳ ನಾಗರೀಕರ ಕಷ್ಟಗಳಿಗೆ ಸ್ಪಂದಿಸಿ, ಮೂಲ ಸೌಕರ್ಯಗಳ ಅಭಿವೃದ್ದಿಗೆ ಕೈಜೋಡಿಸಿ ಎಂದು ಸಲಹೆ ನೀಡಿದರು.
ಬಾಗೇಪಲ್ಲಿಯ ಪುರಸಭೆ ಅದ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾನೂನಿನ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನೂತನ ಅದ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಸದಸ್ಯರಾದ ಶ್ರೀನಿವಾಸ ರೆಡ್ಡಿ, ಅಶೋಕ ರೆಡ್ಡಿ, ಎ.ನಂಜುಂಡಪ್ಪ, ಗಡ್ಡಂ ರಮೇಶ್, ಗುಲ್ನಾಜ್‌ಬೇಗಂ, ಜಭಿವುಲ್ಲಾ ಖಾನ್, ಎ.ಶ್ರೀನಾಥ, ಶಭಾನಾ, ಪದ್ಮ ಮಲ್ಲೇಶ್, ಹಸೀನಾ ಮನ್ಸೂರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಪ್ರಭಾಕರರೆಡ್ಡಿ, ಮುಖಂಡರಾದ ಗೂಳೂರು ರಮೇಶ್ ಬಾಬು, ಜಯಪ್ರಕಾಶ್ ನಾರಾಯಣ್, ಎ.ವಿ.ಪೂಜಪ್ಪ, ಮಂಜುನಾಥರೆಡ್ಡಿ, ಲಕ್ಷ್ಮೀ ನರಸಿಂಹಪ್ಪ ಮತ್ತಿತರರು ಇದ್ದರು.