ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಲಾಗಿತ್ತು ಎಂಬ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.
ತುಮಕೂರಿನ ಕ್ಯಾತಸಂದ್ರ ಠಾಣೆಯಲ್ಲಿ ಆರೋಪಿ ಸೋಮ ಮತ್ತು ಅಮಿತ್ ಶರಣಾಗಿದ್ದಾರೆ. ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಮತ್ತೊಬ್ಬ ಆರೋಪಿ ಭರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ಬೆಳಕಿಗೆ ಬಂದಿತ್ತು. ಆ ಆಡಿಯೋದಲ್ಲಿನ ಮಾತುಕತೆಯಲ್ಲಿ ಸೋಮ, ಭರತ, ಅಮಿತ್, ಗುಂಡ, ಯತೀಶ್ ಎಂಬವರು ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬುದು ತಿಳಿದುಬಂದಿತ್ತು. ಐವರ ವಿರುದ್ಧವೂ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆ: ಮುಸ್ಲಿಮರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಕಡಿತ ಖಂಡಿತ
ರಾಜೇಂದ್ರ ಹತ್ಯೆಗೆ ಐವರು ಆರೋಪಿಗಳು ಸುಪಾರಿ ಪಡೆದಿದ್ದರು. ಹತ್ಯೆಗಾಗಿ 70 ಲಕ್ಷ ರೂಪಾಯಿ ಡೀಲ್ ಮಾಡಿದ್ದರು. ಅಲ್ಲದೆ, ಆರೋಪಿ ಸೋಮ ಮುಂಗಡವಾಗಿ 5 ಲಕ್ಷ ರೂ. ಪಡೆದುಕೊಂಡಿದ್ದ ಎಂದು ಹೇಳಲಾಗಿದೆ. ಆದರೆ, ಸುಪಾರಿ ಕೊಟ್ಟಿದ್ದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.