ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ

Date:

Advertisements

ಮದುವೆ ಎಂದರೆ ಹಲವರ ಜೀವನದಲ್ಲಿ ಒಂದು ವಿಶೇಷತೆ.‌ ಮದುವೆಗಳು ವಿಚಿತ್ರ, ವಿಶೇಷ ಎನಿಸುವಂತೆ ನಡೆದಿವೆ. ವಿಮಾನದಲ್ಲಿ, ನಗರದ ವೃತ್ತಗಳಲ್ಲಿ ನಿಂತು, ಐಷಾರಾಮಿ ಹೋಟೆಲ್‌ಗಳಲ್ಲಿ, ದೂರದ ದೇವಸ್ಥಾನಗಳಲ್ಲಿ, ಅಷ್ಟೇ ಏಕೆ ಸ್ಮಶಾನಗಳಲ್ಲಿಯೂ ಮದುವೆಯಾದವರಿದ್ದಾರೆ. ಕೆಲವರಿಗೆ, ಕೋರ್ಟ್, ವಿಧಾನಸೌಧ, ತಾಜ್ ಮಹಲ್, ಅರಮನೆಗಳಲ್ಲಿ ಮದುವೆ ಆಗುವ ಕನಸಿರುತ್ತದೆ.

ಮಾದರಿಯೆನಿಸುವ ಕುವೆಂಪು ತೋರಿಸಿದ ಸರಳ ಮಂತ್ರ ಮಾಂಗಲ್ಯದ ರೀತಿಯಲ್ಲಿ ಮದುವೆಗಳೂ ನಡೆದಿವೆ. ಆದರೆ ಇಲ್ಲೊಂದು ಜೋಡಿ ವಿಶೇಷವಾಗಿ ಮಾದರಿ ಎನಿಸುವಂತೆ ಸಂವಿಧಾನದ ಸಾಕ್ಷಿಯಾಗಿ ಸರಳವಾಗಿ ವಿವಾಹ ನೆರವೇರಿಸಿಕೊಂಡಿರುವುದು, ಬುದ್ಧ, ಬಸವ, ಅಂಬೇಡ್ಕರ್‌ ಅವರ ಆಶಯಗಳ ಪಾಲನೆಗೆ ಕಂಕಣಬದ್ದರಾಗಿರುವುದು ಇಂದಿನ ಯುವಜನಾಂಗಕ್ಕೆ, ಸಮಾಜಕ್ಕೆ ಮಾದರಿ ನಡೆಯಾಗಿದೆ.‌ ಇಂಥದ್ದೊಂದು ಮಾದರಿ ಮದುವೆ ಚಿತ್ರದುರ್ಗದಲ್ಲಿ ನಡೆದಿದೆ.

1001986604

ಚಿತ್ರದುರ್ಗ ಜಿಲ್ಲೆಯ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವ ರವೀಶ್ ಅವರ ಪುತ್ರಿ ಮೇಘನಾ, ಮಂಡ್ಯ ಜಿಲ್ಲೆಯ ವರ ರಾಕೇಶ್ ಎಂಬುವವರು ವಿನೂತನ ರೀತಿಯಲ್ಲಿ ಸಂವಿಧಾನದ ಸಾಕ್ಷಿ, ಸಾಂಗತ್ಯದ ವಿವಾಹವಾದ ನವ ಜೋಡಿಗಳು.‌ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಕೂಡ ಸಂವಿಧಾನ ಪೀಠಿಕೆಯ ರೀತಿಯಲ್ಲಿ ಮುದ್ರಿಸಿರುವುದು ಕೂಡ ವಿಶೇಷ.‌ ಆಡಂಬರದ ಅದ್ದೂರಿಯ ವಿವಾಹಗಳಿಗೆ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡುವ ಈ ಕಾಲಘಟ್ಟದಲ್ಲಿ ಇದೊಂದು ಸಮಾಜಸ್ನೇಹಿ, ಪರಿಸರ ಸ್ನೇಹಿ, ಆರ್ಥಿಕಸ್ನೇಹಿ ವಿವಾಹವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

Advertisements
1001986621

ಸಣ್ಣ ಸಮಾರಂಭವೊಂದರ ವೇದಿಕೆಯ ರೀತಿ ವಿವಾಹದ ತಯಾರಿ ಮಾಡಿ, ಸರಳವಾಗಿ ಹಾರ ಬದಲಿಸಿಕೊಂಡ ನವಜೋಡಿಗಳು ಸಂವಿಧಾನ ಪೀಠಿಕೆಯಂತೆ ತಾವೇ ಒಪ್ಪಿ ಬರೆದುಕೊಂಡಿದ್ದ ಬಾಳ ಸಂವಿಧಾನವನ್ನು ಪರಸ್ಪರ ಬೋಧಿಸಿ, ತಮಗೆ ತಾವೇ ಅರ್ಪಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ಪೀಠಿಕೆಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಜೀವನ ಶೈಲಿ, ತಾತ್ವಿಕತೆ ಪಾಲಿಸುತ್ತೇವೆಂದು ಪ್ರಮಾಣೀಕರಿಸಿದ್ದು ಹೊಸದಾಗಿತ್ತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೌತಮ ಬುದ್ಧನ ತತ್ವ, ಚಿಂತನೆಗಳ ಸ್ಮರಣೆಯೊಂದಿಗೆ ಬುದ್ಧ ಪೂರ್ಣಿಮೆ ಆಚರಣೆ.

“ಮೇಘನಾ, ರಾಕೇಶ್ ಆದ ನಾವು ಸಂಗಾತಿಗಳಾಗಲು ಮನಸಾ ಒಪ್ಪಿ ಬಾಳನ್ನು ಮತ್ತಷ್ಟು ಸದೃಢ, ಸ್ವಾವಲಂಬಿ, ಸಾರ್ಥಕ ಮತ್ತು ಸಂಘ ಜೀವನ ನಡೆಸಲು ಸುಖ-ದುಃಖ, ನೋವು-ನಲಿವು, ಬಡತನ-ಸಿರಿತನದಂತಹ ಎಲ್ಲಾ ಕಾಲದಲ್ಲಿಯೂ ಬುದ್ಧ ಬಸವ ಅಂಬೇಡ್ಕರ್ ಅವರ ತಾತ್ವಿಕತೆ ಮತ್ತು ಜೀವನ‌ ಶೈಲಿಯನ್ನು ಅನುಸರಣೆ ಮಾಡುತ್ತ, ಪರಸ್ಪರ ವೈಜ್ಞಾನಿಕವಾಗಿ ಚಿಂತಿಸಲು ಹಾಗೂ ತಾರ್ಕಿಕವಾಗಿ ಯೋಚಿಸಲು‌ ಪ್ರೋತ್ಸಾಹಿಸುತ್ತೇವೆ‌. ಇಬ್ಬರ ಕುಟುಂಬ ವರ್ಗ, ಸ್ನೇಹ ಬಳಗ, ಸಮುದಾಯ ಮತ್ತು ಸಮಸ್ತ ದುಡಿಯುವ ವರ್ಗದ ಹಿತೈಷಿಗಳಿಗೆ, ಅವರ ಕರುಣೆ, ಪ್ರೀತಿಯನ್ನು ಸಮಾನವಾಗಿ ಹಂಚುತ್ತ, ಅವರಿಗಾಗಿ ನಾವು, ನಮಗಾಗಿ ಅವರು ಎನ್ನುವ ಹಾಗೇ ಜೀವಿಸಲು ಮುಂದಾಗಿ, ಯಾವುದೇ ಘಳಿಗೆಯಲ್ಲಿ ಅಪನಂಬಿಕೆ, ಅನುಮಾನ, ಅತಿರೇಕಕ್ಕೆ ಅಸ್ಪದ ಕೊಡದೇ ಮೈತ್ರಿಭಾವದಿಂದ ಎಲ್ಲವನ್ನೂ ಸರಿದೂಗಿಸಿಕೊಳ್ಳುತ್ತ, ಪರಸ್ಪರರ ಅಭಿಪ್ರಾಯವನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಸಮಾನತೆಯ ಕುಟುಂಬವನ್ನಾಗಿಸಿಕೊಳ್ಳಲು ಸಂಕಲ್ಪಮಾಡಿ, 2025ನೇ ವರ್ಷ ಮೇ ತಿಂಗಳ 11ನೇ ತಾರೀಖಿನಂದು ಈ ‘ಬಾಳ ಸಂವಿಧಾನ’ವನ್ನು ನಮಗೆ‌ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಬಾಳ ಶಾಸನವಾಗಿ ಜಾರಿಗೊಳಿಸಿಕೊಳ್ಳುತ್ತ, ಜೀವನದುದ್ದಕ್ಕೂ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರಿಂದ ರಚಿತವಾದ ಭಾರತ ಸಂವಿಧಾನದ ಆಶಯದಂತೆ‌ ಬಾಳ್ವೆ ಮಾಡಲು ಪಣ ತೊಟ್ಟಿದ್ದೇವೆ” ಎಂದು ಬಾಳ ಸಂವಿಧಾನದ ಶಾಸನವನ್ನು ತಮಗೆ ತಾವೇ ಅರ್ಪಿಸಿಕೊಂಡರು.‌

1001986620

ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ನವವಧು ಮೇಘನಾ, “ಸಮಾಜವು ಹಲವಾರು ರೀತಿಯಲ್ಲಿ ಹೆಣ್ಣಿನ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತದೆ. ಅದರಲ್ಲಿ ಮದುವೆಯೂ ಕೂಡ ಒಂದು ರೀತಿಯ ಹೆಣ್ಣಿನ ಆಶಯಗಳು, ಕನಸುಗಳು ಮತ್ತು ಸ್ವಾತಂತ್ರವನ್ನು ಹಿಡಿದಿಡುವ ಪ್ರಯತ್ನವಾಗಿದೆ. ಮದುವೆಯ ಆಚರಣೆಗಳಲ್ಲಂತೂ ತಾಳಿ, ಕಾಲುಂಗರಗಳಂತಹ ಹಲವಾರು ಗಂಡಾಳಿಕೆಯ ಸೂಚ್ಯ ವಿಷಯಗಳನ್ನು ಈ ಮದುವೆಗಳು ಒಳಗೊಂಡಿವೆ. ಇಂಥಹ ಆಚರಣೆಗಳು ಹೆಣ್ಣನ್ನು ಗಂಡಿನ ಆಸ್ತಿಯೆಂಬಂತೆ ಪರಿಗಣಿಸುವ ಊಳಿಗಮಾನ್ಯ ಪದ್ಧತಿಯಾಗಿದೆ. ಹೊಸ ಪೀಳಿಗೆಯು ಇಂತಹ ವಿಚಾರಗಳನ್ನು ಪ್ರಶ್ನಿಸಬೇಕಾಗಿದೆ. ಇಂಥಹ ಆಚರಣೆಗಳ ಉಗಮದ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ. ಅವರು ಸ್ತ್ರೀವಾದಿ ಕೂಡ ಆಗಿದ್ದರು. ಅವರ ಆಶಯಗಳಲ್ಲಿ ಹೆಣ್ಣಿನ ಸ್ವಾತಂತ್ರ್ಯ ಬಹಳ ಮೂಲಭೂತವಾಗಿತ್ತು. ಹಾಗಾಗಿ ಬಾಬಾಸಾಹೇಬರ ಆಲೋಚನೆಗಳನ್ನು ಗೌರವಿಸುತ್ತ ಈ ಸಾಂಗತ್ಯವನ್ನು ನಾವು ಸ್ವೀಕರಿಸಿದ್ದೇವೆ” ಎಂದು ಪ್ರತಿಪಾದಿಸಿದರು.

1001986619 1

ಹೊಸ ಬಾಳಿಗೆ ಹೆಜ್ಜೆಯಿಟ್ಟ ವರ ರಾಕೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೈಸೂರಿನ ‘ಮಾನವ ಮಂಟಪ’ದ ಮುಖಾಂತರ ನನ್ನ ಗೆಳೆಯ, ಗೆಳತಿಯರ ಸಾಕಷ್ಟು ಅಂತರ್ಜಾತಿ ವಿವಾಹಗಳನ್ನು ಆಯೋಜಿಸಿದ್ದ ನನಗೂ ಕೂಡ ಸರಳ ವಿವಾಹವಾಗುವ ಅಭಿಲಾಷೆಯಿತ್ತು. ಜಾತಿ ವ್ಯವಸ್ಥೆಯ ಬೇರನ್ನು ಅಲುಗಾಡಿಸಲು ಅಂತರ್ಜಾತಿ ಸಾಂಗತ್ಯಗಳು ಮದ್ದಾಗುತ್ತವೆ ಎಂಬುದು ನಮ್ಮ ನಂಬಿಕೆ. ಪುರೋಹಿತ ಶಾಹಿ ಮೌಢ್ಯಾಚರಣೆಗಳು, ಮುಹೂರ್ತ, ಕಾಲ, ಘಳಿಗೆಗಳೆಂದು ತುಂಬಿರುವ ಈ ‘ಮದುವೆ’ ಎಂಬ ಕಟ್ಟುಪಾಡುಗಳನ್ನು ಮೀರುವುದು, ವೈಜ್ಞಾನಿಕವಾಗಿ ಚಿಂತಿಸುವುದು ಹಾಗೂ ಮದುವೆಯ ಹೆಸರಿನಲ್ಲಿ‌ ದುಂದು ವೆಚ್ಚವನ್ನು ತಡೆಯುವ ಈ ರೀತಿಯ ‘ಸಾಂಗತ್ಯ’ಗಳು ಹೊಸ ಸಂಗಾತಿಗಳಿಗೆ ಮಾದರಿಯಾಗಬೇಕಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರೀತಿಸಿ ಜಾತಿ ಕಾರಣಕ್ಕೆ ಮದುವೆಗೆ ನಿರಾಕರಣೆ ಆರೋಪ, ಯುವತಿ ಆತ್ಮಹತ್ಯೆ.

ಒಟ್ಟಿನಲ್ಲಿ ಆಡಂಬರದ ಜೀವನಕ್ಕೆ ಮಾರುಹೋಗುತ್ತಿರುವ ಇಂದಿನ ಯುವಜನಾಂಗದ ನಡುವಿನಲ್ಲಿ ಸಂವಿಧಾನ ಆಶಯಗಳಿಗೆ ತಕ್ಕಂತೆ, ಬುದ್ಧ ಬಸವ ಅಂಬೇಡ್ಕರ್ ಅವರ ಆಶಯಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಯುವ ಜೋಡಿಯೊಂದು ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವುದು ಸಮಾಜದ ಹಿತದೃಷ್ಟಿಯಿಂದ ಒಂದು ಉತ್ತಮ ಹೆಜ್ಜೆ. ಇದೇ ರೀತಿಯ ಹತ್ತು ಹಲವು ಸಾವಿರಾರು ವಿವಾಹಗಳು ನೆರವೇರಲಿ. ಸಾಮಾಜಿಕ ಸಮಾನತೆ, ಕೌಟುಂಬಿಕ ಭದ್ರತೆಗೆ ಮಾದರಿಯಾಗಲಿ ಹಾಗೂ ಇಂಥದೊಂದು ಮಾದರಿ ವಿವಾಹಕ್ಕೆ ಸಾಕ್ಷಿಯಾದ ರಾಕೇಶ್-ಮೇಘನಾ ಜೋಡಿ ನೂರಾರು ಕಾಲ ಸಮಾನತೆ, ಸಹಬಾಳ್ವೆಯ ಜೀವನದೊಂದಿಗೆ ಸಮಾಜಕ್ಕೆ ಮಾದರಿಯಾಗಲಿ ಎನ್ನುವುದು ಎಲ್ಲರ ಆಶಯ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

8 COMMENTS

  1. ಹೇಗಾದ್ರೂ ಮದುವೆ ಆಗಿ ಆದರೆ ಮದುವೆ ಆದ ಒಂದೆರೆಡು ವರ್ಷಗಳಲ್ಲಿ ಪರಸ್ಪರ ನಂಬಿಕೆ ಕಳೆದುಕೊಂಡು ವಿಚ್ಚೇದನ ಪಡೆದು ಕೊಳ್ಳಬೇಡಿ.ಅಷ್ಟೇ. ಬುದ್ಧನ ತರಹ ಮಧ್ಯ ರಾತ್ರಿಯಲ್ಲಿ ಹೆಂಡತಿ ಮತ್ತು ಹಸುಗೂಸನ್ನು ಮನೆಯಲ್ಲಿ ಬಿಟ್ಟು ಕಾಡಿಗೆ ಹೋಗಬೇಡಿ. ಕಾಡಿನಲ್ಲಿ ಮರದ ಕೆಳಗೆ ಕುಳಿತರೆ ಜೀವನದ ಸಮಸ್ಯೆ ಪರಿಹಾರ ಆಗೋದಿಲ್ಲ. ಮನೆಯೆಲ್ಲೆಿದ್ದುಕೊಂಡು ಜೀವನ ಎದುರಿಸಿ.

    • ಹೌದು……..
      ಇದು ವರ್ಷಗಳಿಗೆ ಮಾತ್ರ ಸೀಮಿತವಾಗಿರಬಾರದು. ನಿಮ್ಮ ಜೀವ ಇರೋವರಿಗೆ ಈ ಮಾದರಿ ಎಲ್ಲರಿಗೂ ಸಾಕ್ಷಿಯಾಗಿ ಇರಬೇಕು.

  2. “A celebration of love sealed with respect, responsibility, and the law — witnessing a wedding that honors our Constitution is truly inspiring. Love, when rooted in values, blossoms forever.”

  3. Thali, kalungura idre matra gandalike na ? Hagadre avenoo illada sabaralli hennina jeevana yake adhogathi agide? Are benda madike mathina hagide vadhu statement…! Munde hutto maguge yava jathi antha kodtheerappa?

  4. ಇಳೆ ನಿಮ್ಮ ದಾನ
    ಬೆಳೆ ನಿಮ್ಮ ದಾನ
    ಎತ್ತು ನಿಮ್ಮ ದಾನ
    ಬಿತ್ತು ನಿಮ್ಮ ದಾನ
    ಸುತ್ತಿ ಸುಳಿದು ಬೀಸುವ ಗಾಳಿಯೂ ನಿಮ್ಮ ದಾನ
    ಸುತ್ತ ಹರಿವ ಸಾಗರವೆಲ್ಲವೂ ನಿಮ್ಮ ದಾನ
    ನಿಮ್ಮ ದಾನವನುಂಡು ಅನ್ಯರ ಹೊಗಳುವ
    ಕುನ್ನಿಗಳನೇನೆಂಬೆ ಕಾಣಾ ರಾಮನಾಥ

    ಇದು ಆ ಮಹಾದಾನಿಯಾದ ಮಹಾದೇವನನ್ನು ಮರೆತು
    ಹೀನ ಬದುಕು ಬದುಕುವ ಪ್ರಗತಿಪರ ಬುದ್ಧಿಜೀವಿಗಳಿಗೆ
    ಹೇಳಿದ ವಚನವಿದು.
    ಇಂಥ ಸೋಗಲಾಡಿ ಬುದ್ದಿಜೀವಿಗಳ ಪ್ರಗತಿಪರ ಜೀವಿಗಳ ಮಾತು ಕೇಳಿ ಈ ನವಜೋಡಿಗಳು ಆ ಮಹಾದಾನಿಯಾದ ಮಹಾದೇವನನ್ನೇ ಮರೆತು ಬದುಕು ಸಾಗಿಸಲು ನಿರ್ಧರಿಸಿರುವುದು ಮಹಾ ತಪ್ಪು.

  5. ನಿಮ್ಮ ಈ ಮದುವೆಯು ಮುಂದಿನ ಪೀಳಿಗೆಯವರು ಅನುಸರಿಸುವ ಹಾಗೇ ಆಗಲಿ ಪರಸ್ಪರ ನಂಬಿಕೆಯ ಹೊರತಾಗಿ ಹಾಗೂ ಪರಸ್ಪರ ಇಬ್ಬರು ಗೌರವದಿಂದ ನಡೆದುಕೊಂಡು ಹೋಗುವ ಹೊರತಾಗಿ ಜೀವನದಲ್ಲಿ ಬೇರೇನೂ ಇಲ್ಲ ಹೀಗೆ ನೂರು ಕಾಲ ಬದುಕಿ ಎಂದು ಆಶಿಸುತ್ತೇನೆ ಹಾಗೆಯೇ ಮತ್ತು ಒಂದು ವಿಷಯ ಎಲ್ಲದಕ್ಕೂ ಕಾನೂನಿನಲ್ಲಿ ಪರಿಹಾರವಿಲ್ಲ ಮಾನವೀಯತೆಯಲ್ಲಿ ಇರುತ್ತದೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X