ಬಬಲಾದಿಯ ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನದಲ್ಲಿ ಫುಲೆ ಕಲಿಕಾ ಕೇಂದ್ರವು ಮಕ್ಕಳಿಂದ ಸಂವಿಧಾನದ ಪೂರ್ವ ಪೀಠಿಕೆ ಓದಿಸಿ, ಬಾಬಾ ಸಾಹೇಬರ ಕುರಿತ ಹಾಡುಗಳನ್ನು ಹಾಡಿಸಿ, ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಿತು.
ಈ ವೇಳೆ ಮಾತನಾಡಿದ ಲಕ್ಷ್ಮೀ ದ್ರಾವಿಡ, ಇಂದು ನಮ್ಮ ದೇಶಕ್ಕೆ ಬಾಬಾ ಸಾಹೇಬರು ಸಂವಿಧಾನ ಬರೆದುಕೊಟ್ಟ ದಿನ. ಭಾರತ ಸಂವಿಧಾನವನ್ನು ಬರೆಯಲು ಎರಡು ವರ್ಷ, 11 ತಿಂಗಳು, 18 ದಿನಗಳು ತೆಗೆದುಕೊಂಡಿತು.
ದೇಶದ ಎಲ್ಲ ಸಾಧನೆಗಳಿಗೂ ಸಂವಿಧಾನವೇ ಅಡಿಪಾಯ. ಶಿಕ್ಷಣ, ಸಂಘಟನೆ, ಹೋರಾಟವೇ ನಮ್ಮ ಗುರಿ. ಹೆಣ್ಣುಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯ ಬಿಡಬೇಡಿ. ನಾಲ್ಕು ಅಕ್ಷರಗಳ ಮಧ್ಯ ಬಿಟ್ಟು ಮಕ್ಕಳಲ್ಲಿ ಸಂವಿಧಾನದ ಅರಿವು, ಜಾಗೃತಿ ಮೂಡಿಸಬೇಕು ಎಂದರು.
ಸಂವಿಧಾನದ ದಿನದ ಅಂಗವಾಗಿ ಮಕ್ಕಳಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಬಬಲಾದಿ ಗ್ರಾ.ಪಂ ಸದಸ್ಯರಾದ ಶಾಂತಾಬಾಯಿ ಬನಸೋಡೆ, ಬೌರಮ್ಮ ಬನಸೋಡೆ, ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವಸಹಾಯ ಸಂಘ ಕಾರ್ಯದರ್ಶಿ ಬೈಜಾಬಾಯಿ ಹರಿಜನ, ಯಶೋಧರ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾದ ಕಸ್ತೂರಿ ಶಿವಶರಣ, ಎಳಬಾಯಿ ಬನಸೋಡೆ, ಗಂಗಾ ಶಿವಶರಣ, ವಿಜಯಲಕ್ಷ್ಮಿ ಬನಸೋಡೆ, ವಿದ್ಯಾ ಶಿವಶರಣ, ರೇಣುಕಾ ದಶವಂತ್, ಪುಂಡಲೀಕ ಶಿವಶರಣ, ಕುಮಾರ ಬನಸೋಡೆ, ಸಂಗಮೇಶ್ ಶಿಂಗೆ, ಎಲ್ಲಪ್ಪ ಬನಶೋಡೆ ಇತರರು ಇದ್ದರು.