ಮೈಸೂರು ಜಿಲ್ಲೆ, ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಡದಹಳ್ಳಿ ಹಾಡಿಗೆ ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಸುನಿಲ್ ಟಿ ಆರ್ ಮಾತನಾಡಿ ” ದಡದಹಳ್ಳಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಹಣ ಮಂಜೂರಾಗಿ ಹಲವು ತಿಂಗಳುಗಳು ಕಳೆದಿದ್ದರು ಇದುವರೆಗೂ ರಸ್ತೆ ಕೆಲಸ ಪ್ರಾರಂಭವಾಗಿಲ್ಲ. ಏಪ್ರಿಲ್ ಒಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸಿ ಹೋದವರು ಇದುವರೆಗೂ ಇತ್ತ ಕಡೆ ಗಮನ ಹರಿಸಿಲ್ಲ.
ಈಗಾಗಲೇ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಬೇಸಿಗೆಯಲ್ಲಿ ಬಿದ್ದ ಒಂದು ದಿನದ ಮಳೆಯಿಂದಾಗಿಯೇ ಆಳವಾದ ಗುಂಡಿಗಳಲ್ಲಿ ನೀರು ತುಂಬಿಕೊಂಡು ಅಲ್ಲಲ್ಲಿ ನೀರಿನ ಹೊಂಡಗಳು ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಹಾಡಿಯಿಂದ ಶಾಲೆಗೆ ಹೋಗುವ ಮಕ್ಕಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೆ ಶಾಲೆಗೂ ಸಹ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಇನ್ನೂ ಅನಾರೋಗ್ಯ ಪೀಡಿತ ಬಾಣಂತಿಯರು, ಗರ್ಭಿಣಿಯರು, ವೃದ್ದರು ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.

ನಾಗರಿಕ ಸಮಾಜದಲ್ಲಿದ್ದರು ಯಾವುದೇ ಸೌಲಭ್ಯಗಳಿಲ್ಲದೆ ಹಾಡಿ ಜನ ವಾಸಿಸುತ್ತಿದ್ದಾರೆ. ನಮ್ಮ ಜನಪ್ರತಿನಿಧಿಗಳು ತಮ್ಮ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಳ್ಳುವಾಗ ಯಾವ ವಿಳಂಬವಾಗುವುದಿಲ್ಲ. ಜನ ಸಾಮಾನ್ಯರ ಕೆಲಸ ಮಾಡುವಾಗ ವಿನಾಕಾರಣ ವಿಳಂಬ ಮಾಡುವುದು ಖಂಡನೀಯ. ಹಾಗಾಗಿ, ಈ ಕೂಡಲೇ ಮಳೆಗಾಲ ಪ್ರಾರಂಭವಾಗುವ ಮುನ್ನವೇ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ರಸ್ತೆ ಕೆಲಸವನ್ನು ಪೂರ್ಣಗೊಳಿಸಬೇಕೆಂದು ” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಶೈಕ್ಷಣಿಕ ಹರಿಕಾರ ಟಿ.ವಿ. ವಸಂತರಾಜ ಅರಸ್ ನೆನಪಿನಾರ್ಥ ನುಡಿ ನಮನ
ದಡದಹಳ್ಳಿ ಹಾಡಿ ಮುಖಂಡ ನಂಜುಂಡ, ಕಾವ್ಯ, ರೇಖಾ, ಶ್ರೀಧರ್, ಸೋಮಣ್ಣ, ಚಿಕ್ಕಮ್ಮ, ಕಾಳ, ಕರಿಯ, ಬೊಮ್ಮ, ಕುಳ್ಳಮ್ಮ, ಭಾಗ್ಯ ಸೇರಿದಂತೆ ಹಾಡಿಯ ಜನರು ಇದ್ದರು.