ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿದಂತೆ ಇತರೆ ಆರು ಜನರಿಂದ ಬೆದರಿಕೆ ಇರುವುದಾಗಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಭಾಲ್ಕಿ ತಾಲ್ಲೂಕಿನ ಕಟ್ಟಿತುಗಾಂವ್ ಗ್ರಾಮದ ಮೃತ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ (26) ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತ್ರತ್ವದ ಬಿಜೆಪಿ ನಿಯೋಗ ಭಾನುವಾರ ಸಂಜೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿತು.
ʼಅಕ್ಷರಶಃ ಸಚಿನ್ ಸಾವಿನಿಂದ ದಿಗ್ಮೂಢ ಸ್ಥಿತಿಯಲ್ಲಿರುವ ಕುಟುಂಬದ ಸ್ಥಿತಿ ಮಾನವೀಯತೆ ಇರುವ ಎಂಥವರ ಅಂತಃಕರಣವನ್ನೂ ಕಲಕುತ್ತದೆ. ಅನಾಥ ಪ್ರಜ್ಞೆ ಎದುರಿಸುತ್ತಿರುವ ಮೃತರ ಆಶ್ರಯಿಸಿದ್ದ ಕುಟುಂಬ ಸದಸ್ಯರ ಹಾಗೂ ಬಂಧುಗಳ ಆಕ್ರಂದನದ ಶಾಪ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತಟ್ಟದೇ ಬಿಡದು, ದುಷ್ಕರ್ಮಿಗಳ ಗುಂಪನ್ನು ಪೋಷಿಸುತ್ತಿರುವ ಪ್ರಿಯಾಂಕ್ ಖರ್ಗೆ ಇದರ ಫಲ ಅನುಭವಿಸಲೇಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಹೋರಾಟ ಕೊನೆಯಾಗದು, ನೊಂದ ಸಚಿನ್ ಕುಟುಂಬದೊಂದಿಗೆ ನಾವಿದ್ದೇವೆʼ ಎಂದು ಹೇಳಿದರು.
“ಹೇಳೋದು ಸಿದ್ದಾಂತ ಮಾಡೋದು ದುರಾಚಾರ” ಊರಿಗೆಲ್ಲ ಉಪದೇಶ, ಸಿದ್ಧಾಂತ ಹೇಳುತ್ತಾ ತಾವು ಮಾತ್ರ ನೊಂದವರ ಧ್ವನಿಯಾಗಬಲ್ಲೆವು ಎಂಬ ರೀತಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ನೈಜ ಮುಖವಾಡ ಈ ಘಟನೆಯಿಂದ ಕಳಚಿ ಬಿದ್ದಿದೆʼ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ʼವಿರೋಧ ಪಕ್ಷದಲ್ಲಿದಾಗ ಇಂಥದ್ದೇ ಪ್ರಕರಣಗಳಲ್ಲಿ ಅಧಿಕಾರದಲ್ಲಿದ್ದವರ ರಾಜೀನಾಮೆಗೆ ಆರ್ಭಟಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನಾವರು ತಮ್ಮದೇ ಸರ್ಕಾರದ ಅವಧಿಯಲ್ಲಿ ನಡೆದಿರುವ ಘಟನೆಯ ಹಿನ್ನಲೆಯಲ್ಲಿ ಈ ಕೂಡಲೇ ದುಷ್ಟರು, ಪುಂಡರು, ಕಮಿಷನ್ ವಸೂಲಿಗಾರರನ್ನು ಜೊತೆಗಿಟ್ಟುಕೊಂಡು ಒಬ್ಬ ಅಮಾಯಕ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣರಾಗಿರುವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಂಡು ತನಿಖೆಯು ಪಾರದರ್ಶಕವಾಗಿ ನಡೆಯಲು ಅವಕಾಶ ಮಾಡಿಕೊಡಲಿʼ ಎಂದು ಆಗ್ರಹಿಸಿದರು.
ʼರಾಜ್ಯ ಸರ್ಕಾರ ಸಚಿನ್ ಕುಟುಂಬಕ್ಕೆ ಕನಿಷ್ಠ ಒಂದು ಕೋಟಿ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು.ಈ ಪ್ರಕರಣದ ಹಿಂದೆ ಎಷ್ಟೇ ಪ್ರಭಾವವಿದ್ದರೂ ಯಾವುದೇ ಕಾರಣಕ್ಕೂ ಮುಚ್ಚಿ ಹಾಕಲು ಬಿಡುವುದಿಲ್ಲ. ಸಿಎಂ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳದೆ ಸಿಬಿಐ ತನಿಖೆಗೆ ಒಪ್ಪಿಸಿ, ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನು ತುದಿಗಾಲಲ್ಲಿ ನಿಲ್ಲಿಸಲು ಬಿಜೆಪಿ ಹೋರಾಟ ಮಾಡುತ್ತೇವೆʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಸರ್ಕಾರ ಬದ್ಧ : ಸಚಿವ ಈಶ್ವರ ಖಂಡ್ರೆ
ನಮಗೆ ಯಾವುದೇ ಅನುಕಂಪ, ಪರಿಹಾರ ಬೇಡ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಮೃತ ಸಚಿನ್ ಕುಟುಂಬ ಆಗ್ರಹಿಸುತ್ತಿದೆ. ಸಚಿನ್ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆಯವರು ಕೂಡಲೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ತನಿಖೆಗೆ ಸಿದ್ದರಾಗಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.