ಬೆಳಗಾವಿ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿಕೊಂಡು ನಗರದ ಪರಿಸರವನ್ನೂ ರಕ್ಷಣೆಯೊಂದಿಗೆ ಅಭಿವೃದ್ಧಿಯ ಹೆಜ್ಜೆ ಇಡಲು ಮುಂದಾಗಿದೆ.
ನಗರಗಳ ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಇದೇ ಪ್ಲಾಸ್ಟಿಕ್ ತ್ಯಾಜ್ಯ ಬಳಸಿಕೊಂಡು ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕು ಎಂದು ಪಾಲಿಕೆ ಗುರಿಹೊಂದಿದೆ.
ಈಗಾಗಲೇ ಇದಕ್ಕೆ ಅನುಮೋದನೆ ಕೂಡ ಸಿಕ್ಕಿದ್ದು, ಜ.2ರಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ ಅವರು ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಪ್ಲಾಸ್ಟಿಕ್ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ. ಆದರೂ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೇ ನಡದೇ ಇದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಪೌಡರ್ ಆಗಿ ಪರಿವರ್ತಿಸಿ, ಅದನ್ನು ರಸ್ತೆಗೆ ಡಾಂಬರೀಕರಣ ಮಾದರಿಯಲ್ಲಿ ಬಳಸಬೇಕು ಎಂಬುದೇ ಈ ಯೋಜನೆ.
ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಈ ಯೋಜನೆಗೆ ಕಾರ್ಯರೂಪ ನೀಡಲು ಮಹಾನಗರ ಪಾಲಿಕೆ ಆಡಳಿತ ಗುಂಪು ನಿರ್ಧರಿಸಿದೆ. ಈಚೆಗೆ ನಡೆದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾಣ ಕೈಗೊಳ್ಳಲಾಗಿದೆ. ನಾಲ್ಕು ವರ್ಷಗಳ ಬಳಿಕ ಹೊಸದಾಗಿ ಮೇಯರ್ ಚುನಾಯಿತರಾದ ಬಳಿಕ ಅಭಿವೃದ್ಧಿ ಹೆಜ್ಜೆ ಇಡಲಾಗಿದೆ.
ನಗರದ ವಿವಿಧ ಕಡೆಗೆ ದಾಳಿ ನಡೆಸಿರುವ ಮಹಾನಗರ ಪಾಲಿಕೆ ಟನ್‌ಗಟ್ಟಲೇ ಪ್ಲಾಸ್ಟಿಕ್ ವಶಕ್ಕೆ ಪಡೆದುಕೊಂಡಿದೆ. ಇದೆಲ್ಲವನ್ನೂ ಪೌಡರ್ ತಯಾರಿಕೆಗೆ ಬಳಸಲಿದೆ. ಜತೆಗೆ ಮನೆ ಮನೆಯಲ್ಲಿ ಸಂಗ್ರಹಿಸುವ ಒಣ ಕಸದಲ್ಲಿಯ ಪ್ಲಾಸ್ಟಿಕ್ ಬೇರ್ಪಡಿಸಿ ಪೌಡರ್ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಪಾಲಿಕೆಯ ಆರೋಗ್ಯ ಇಲಾಖೆಯಿಂದ ಪೌಡರ್ ತಯಾರಿಸಿ ಅದನ್ನು ಕಟ್ಟಡ ನಿರ್ಮಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.
ರಸ್ತೆ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ಪೌಡರ್ ಬಳಕೆಯನ್ನು ಕಡ್ಡಾಯವಾಗಿ ಬಳಸುವಂತೆ ಎಲ್ಲ ಗುತ್ತಿಗೆದಾರರಿಗೂ ಸೂಚನೆ ನೀಡಲಾಗಿದೆ. ಹೀಗಾಗಿ ಪ್ರತಿ 200 ಮೀಟರ್ ರಸ್ತೆಗೆ 250 ಕೆಜಿಯಿಂದ 300 ಕೆಜಿ ಪ್ಲಾಸ್ಟಿಕ್ ಪೌಡರ್ ಬೇಕಾಗುತ್ತದೆ. ಬೆಳಗಾವಿ ನಗರದಲ್ಲಿ ಪ್ರತಿದಿನ 6 ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸಿಗುತ್ತದೆ.
ಇಲ್ಲಿನ ಆಟೊ ನಗರದ ಕಾರ್ಖಾನೆಯೊಂದರಲ್ಲಿ ಪ್ಲಾಸ್ಟಿಕ್ ಪೌಡರ್ ತಯಾರಿಸಲಾಗುತ್ತಿದೆ. ಇಲ್ಲಿಂದ ರಸ್ತೆಗೆ ಅವಶ್ಯಕತೆ ಇರುವ ಪೌಡರ್ ನೀಡಲಾಗುತ್ತಿದೆ. ಪ್ರಾಯೋಗಿಕವಾಗಿ ಸದ್ಯ 500 ಕೆ.ಜಿ. ಪೌಡರ್ ಸಿದ್ಧಪಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಪೌಡರ್ ಸಿದ್ಧಪಡಿಸುವ ಯಂತ್ರ ಖರೀದಿಸುವುದಕ್ಕೂ ಪಾಲಿಕೆ ನಿರ್ಧರಿಸಿದೆ. ಇಲ್ಲಿ ಸಿದ್ಧಗೊಳ್ಳುವ ಪ್ಲಾಸ್ಟಿಕ್ ಅನ್ನು ಗುತ್ತಿಗೆದಾರರಿಗೆ ಮಾರಾಟ ಮಾಟಲಾಗುವುದು. ಇದರಿಂದ ಪಾಲಿಕೆಗೆ ಆದಾಯವೂ ಬರಲಿದೆ ಎಂದು ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹನುಮಂತ ಕಲಾದಗಿ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.