ಗ್ರಾಮ ಪಂಚಾಯಿತಿ ಅಧಿಕಾರಿಗಳು ಫೋನ್ ಪೇ ಮೂಲಕ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಪ್ರಶ್ನಿಸಿದಕ್ಕೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಚಳ್ಳಕೆರೆಯಲ್ಲಿ ತಾಲ್ಲೂಕಿನಲ್ಲಿ ಮಂಗಳವಾರ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ಮಹೇಶ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಪಂಚಾಯಿತಿಯ ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರೊಬ್ಬರಿಂದ ಗ್ರಾಮ ಪಂಚಾಯತಿನಲ್ಲಿ ಕೆಲಸ ನಿರ್ವಹಿಸುವ ನೌಕರರೊಬ್ಬರ ಮೂಲಕ ಪಿಡಿಒ ಅವರು 5 ಸಾವಿರ ಫೋನ್ ಪೇ ಮಾಡಿಸಿಕೊಂಡು ಲಂಚ ಸ್ವೀಕರಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹಲವು ವರ್ಷಗಳಿಂದ ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ನಗರಂಗೆರೆ ಪಂಚಾಯಿತಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದೀಗ ರಾಜಾರೋಷವಾಗಿ ಆನ್ಲೈನ್ ಮೂಲಕ ಲಂಚ ಸ್ವೀಕರಿಸುವ ಪರಿಸ್ಥಿತಿಗೆ ಬದಲಾಗಿದೆಯೇ? ಎಂದು ಕೆಆರ್‌ಎಸ್ ಪಕ್ಷದ ಮಹೇಶ ಎಂಬುವವರು ಪ್ರಶ್ನಿಸಿದ್ದರು.
ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತು ಪ್ರಶ್ನೆ ಮಾಡಿದಕ್ಕೆ ಮಂಗಳವಾರ ಚಳ್ಳಕೆರೆಯ ತಾಲೂಕು ಕಚೇರಿ ಮುಂಭಾಗದಲ್ಲಿ ಮಹೇಶ ಅವರು ಒಬ್ಬರೇ ತೆರಳುತ್ತಿದ್ದಾಗ ಐದಾರು ಜನ ಬಂದು ʼಕೇವಲ ನಗರಂಗೆರೆ ನೌಕರರು, ಪಿಡಿಓ ಮಾತ್ರವೇ ಲಂಚ ಸ್ವೀಕರಿಸುತ್ತಿದ್ದಾರೆಯೇ, ರಾಜ್ಯದ ತುಂಬಾ ಇದು ಹರಡಿಲ್ಲವೇ, ಇದನ್ನು ಪ್ರಶ್ನಿಸಿದಕ್ಕೆ ನೀನ್ಯಾರುʼ ಎಂದು ಬೆದರಿಸಿ ಹಲ್ಲೆ ನಡೆಸಿದ್ದಾರೆʼ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸ್ ಠಾಣೆಯಿಂದ ಕೇವಲ 10 ಮೀಟರ್ ಅಂತರದಲ್ಲಿ ಘಟನೆ ನಡೆದರೂ ಪೊಲೀಸರು ಸ್ಥಳಕ್ಕೆ ಆಗಮಿಸಲಿಲ್ಲ. ಘಟನೆ ಕುರಿತು ಯಾವುದೇ ಮಾಹಿತಿ ಕಲೆ ಹಾಕಿಲ್ಲ ಎಂದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಹಲ್ಲೆಗೊಳಗಾದ ಯುವಕ ಮಹೇಶ್ ಮಾತನಾಡಿ, ʼಗ್ರಾ.ಪಂ. ನೌಕರರು ಫೋನ್ ಪೇ ಮೂಲಕ ಲಂಚದ ಹಣ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ ಪಿಡಿಒ ಕಡೆಯವರು ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನೇ 112ಕ್ಕೆ ಕರೆ ಮಾಡಿದ ಬಳಿಕ ಪೊಲೀಸರನ್ನು ಬಂದಿದ್ದರು. ಹಲ್ಲೆಯಿಂದ ಕಣ್ಣು, ಹೊಟ್ಟೆ ಮತ್ತು ಹೊಟ್ಟೆಯ ಕೆಳಭಾಗಕ್ಕೆ ಬಲವಾದ ಪೆಟ್ಟಾಗಿದೆ. ಘಟನೆ ನಡೆದು ಏಳು ಗಂಟೆ ಕಳೆದರೂ ಪೊಲೀಸರು ಯಾವುದೇ ಮಾಹಿತಿ ಪಡೆದಿಲ್ಲ, ಹೇಳಿಕೆ ದಾಖಲಿಸಿಕೊಂಡಿಲ್ಲ” ಎಂದು ಪ್ರತಿಕ್ರಿಯಿಸಿದರು.
ನಗರಂಗೆರೆ ಪಂಚಾಯಿತಿಯಲ್ಲಿ ಎಂಟತ್ತು ವರ್ಷಗಳಿಂದ ಒಬ್ಬರೇ ಪಿಡಿಓ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಒಂದೇ ಕಡೆ ನಿಯುಕ್ತಿಗೊಳ್ಳಲು ಕಾರಣವೇನು? ಹಲ್ಲೆಗೊಳಗಾದ ಮಹೇಶನನ್ನು ಅಧಿಕಾರಿಗಳೇ ಸುಪಾರಿ ಕೊಟ್ಟು ಹಲ್ಲೆ ನಡೆಸಲು ತಿಳಿಸಿದ್ದಾರೆ. ಈ ಘಟನೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಕೈವಾಡದಿಂದ ನಡೆದಿದೆ. ಭ್ರಷ್ಟಾಚಾರ ಪ್ರಶ್ನಿಸಿದಕ್ಕೆ ಈ ಹಿಂದೆ ಕೂಡ ಮಹೇಶ ಅವರ ಮೇಲೆ ಎರಡು ಬಾರಿ ಹಲ್ಲೆ ನಡೆದಿತ್ತುʼ ಎಂದು ಮಹೇಶ ಸಂಬಂಧಿಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ? ದರ್ಶನ್ ಗನ್ ಪರವಾನಗಿ ರದ್ದುಗೊಳಿಸಿದ ಪೊಲೀಸರು
ಮಾರಣಾಂತಿಕ ಹಲ್ಲೆಗೊಳಗಾದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ಮಹೇಶ್ ನಗರಂಗೆರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚಿತ್ರದುರ್ಗ ನಗರ ಆಸ್ಪತ್ರೆಗೆ ರವಾನಿಸಲಾಗಿದೆ.