ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು, ಗಲಭೆ, ಗಲಾಟೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದ ಗೋವಿಂದರೆಡ್ಡಿ ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧ ಬೀದರ ನಗರದ ಬಿ.ವ್ಹಿ.ಭೂಮರೆಡ್ಡಿ ವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರನ್ವಯ ಜೂ. 4ರ ಬೆಳಿಗ್ಗೆ 6ಗಂಟೆಯಿಂದ ಜೂ.5ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಸಾರ್ವಜನಿಕರು ಸಕಾರಣವಿಲ್ಲದೆ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮುಂತಾದವುಗಳಲ್ಲಿ ಗುಂಪು ಸೇರುವುದು, ಯಾವುದೇ ವಿಧದ ಆಯುಧಗಳು ಹೊಂದುವುದನ್ನು ಮತ್ತು ಸಾಗಾಟ ಮಾಡುವುದು ನಿಷೇಧಿಸಿದೆ ಹಾಗೂ ಮತ ಎಣಿಕೆ ಕೇಂದ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
“ಈ ಆದೇಶವು ಮದುವೆ, ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ, ಶವ ಸಂಸ್ಕಾರಕ್ಕೆ ಹಾಗೂ ಸರ್ಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯಿಸುವುದು ಮತ್ತು ಆರಕ್ಷಕ ಸಿಬ್ಬಂದಿಗಳು ಕಾರ್ಯನಿರ್ವವಣೆ ವೇಳೆ ಲಾಠಿ/ಬಂದೂಕುಗಳನ್ನು ಉಪಯೋಗಿಸುವುದಕ್ಕೆ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ” ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.