ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇರುವ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದ ದಂಪತಿ ಮತ್ತು ಅವರ ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ರೆಸಾರ್ಟ್‌ಗೆ ಸೋಮವಾರ ಮಧ್ನಾಹ್ನ ಅಪಹರಣವಾಗಿದೆ. ನಿಶಾಂತ್ ಮತ್ತು ಚಂದನ ದಂಪತಿಗಳು ಮತ್ತು ಅವರ ಮಗುವನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
ಭಾನುವಾರ ದಂಪತಿಗಳು ತಮ್ಮ ಮಗುವಿನೊಂದಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಂದಿದ್ದರು. ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು. ಮೂವರೂ ರೆಸಾರ್ಟ್‌ನಿಂದ ಹೊರ ಬಂದಾಗ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ರೆಸಾರ್ಟ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಲಕ್ಷ್ಮಯ್ಯ ಮತ್ತು ಪೊಲೀಸರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದೆ.
“ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಪಹರಣವಾಗಿದೆ. ಎರಡು ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ದಂಪತಿ ಮತ್ತು ಅವರ ಮಗುವನ್ನು ಅಪರಿಸಿದ್ದಾರೆ ಎಂದು ರೆಸಾರ್ಟ್ ಮಾಲೀಕರು ತಿಳಿಸಿದ್ದಾರೆ. ಆದರೆ, ಅವರನ್ನು ಕರೆದೊಯ್ಯುವಾಗ ದಂಪತಿಗಳು ಯಾವುದೇ ಪ್ರತಿರೋಧ ವ್ಯಕ್ತಪಡಿಸಿಲ್ಲ ಎಂಬ ಅಂಶ ತಿಳಿದುಬಂದಿದೆ. ಹೀಗಾಗಿ, ಅವರ ಅಪಹರಣವಾಗಿದೆಯೋ ಅಥವಾ ಅವರ ಸಂಬಂಧಿಕರು ಕರೆದುಕೊಂಡು ಹೋಗಿದ್ದಾರೆಯೋ ಎಂಬುದು ಖಚಿತವಾಗಿಲ್ಲ. ಅವರನ್ನು ಕರೆದೊಯ್ದವರ ಬಗ್ಗೆ ರೆಸಾರ್ಟ್‌ನವರಿಗೂ ಮಾಹಿತಿ ಇಲ್ಲ” ಎಂದು ಎಸ್‌ಪಿ ಬಿ.ಟಿ ಕವಿತಾ ಹೇಳಿದ್ದಾರೆ.