ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ನಿರ್ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೋದರನ ಮಗ ನಿಶ್ಚಲ್ ಜೈನ್ ಮತ್ತು ಆತನ ಸ್ನೇಹಿತರ ಮೇಲೆ ಸೌಜನ್ಯ ಕುಟುಂಬ ಮೊದಲಿನಿಂದಲೂ ಶಂಕೆ ವ್ಯಕ್ತಪಡಿಸಿದ್ದು, ಈಗ ಅವರನ್ನು ವಿಚಾರಣೆಗೆ ಒಳಪಡಿಸಲೇಬೇಕೆಂದು ಒತ್ತಾಯಿಸುತ್ತಿದೆ. ಪ್ರಕರಣ ಸಂಬಂಧ ಮೌನವಾಗಿದ್ದ ವೀರೇಂದ್ರ ಹೆಗ್ಗಡೆ, ಇದೀಗ ಮೌನ ಮುರಿದಿದ್ದು, ‘ನಮ್ಮ ಅಭಿಮಾನಿಗಳು ಏನು ಬೇಕಾದರೂ ಮಾಡಲು ಸಿದ್ದರಿದ್ದಾರೆ. ಅದನ್ನು ಬೇಡವೆಂದು ಹೇಳಿದ್ದೇವೆ’ ಎಂದು ಬೆದರಿಕೆಯ ದಾಟಿಯಲ್ಲಿ ಮಾತನಾಡಿದ್ದಾರೆ.
“ಧರ್ಮಸ್ಥಳ ಕ್ಷೇತ್ರದ ಸಾಧನೆ ಕಂಡು ದ್ವೇಷ ಮಾಡುತ್ತಿರುವ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ನಮಗೆ ಯಾವುದೇ ಭಯವಿಲ್ಲ. ಸಿಬಿಐ ಸಹಿತ ಯಾವುದೇ ತನಿಖೆ ಮಾಡಿದರೂ ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.
“ಕೆಲವರು ನಮ್ಮ ಮೌನವನ್ನೇ ದೌರ್ಬಲ್ಯವೆಂದು ಭಾವಿಸಿದ್ದಾರೆ. ಏನೇನೋ ಮಾತನಾಡುತ್ತಿದ್ಧಾರೆ. ನಾವು ಸುಮ್ಮನಿದ್ದೇವೆ ಎಂದರೆ ತಪ್ಪು ಮಾಡಿದ್ದೇವೆ ಎಂದರ್ಥವಲ್ಲ. ಚರ್ಚೆಗೆ ಅವಕಾಶ ಮಾಡಿಕೊಟ್ಟು ಅನಾಹುತಕ್ಕೆ ದಾರಿ ಮಾಡಿಕೊಡಬಾರದು ಎಂಬುದು ನಮ್ಮ ಉದ್ದೇಶ. ನಮ್ಮ ಅಭಿಮಾನಿಗಳು ಏನು ಬೇಕಾದರೂ ಮಾಡಲು ಸಿದ್ದರಿದ್ದಾರೆ. ನಾವೇ ಬೇಡವೆಂದು ಹೇಳಿದ್ದೇವೆ” ಎಂದು ಹೇಳಿದ್ದಾರೆ.
“ಈಗ ಕೆಲವರು ಮಾತನಾಡುವ ವಿಷಯಗಳು ನಮಗೆ ಸಂಬಂಧವೇ ಇಲ್ಲ. ಈ ವಿಚಾರದಲ್ಲಿ ತನಿಖೆ ಮಾಡಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಅವರು ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ. ಇದರ ಹಿಂದೆ ಅಮಾಯಕ ಹುಡುಗಿಯ ಸಾವಿನ ವಿಚಾರ ಇಲ್ಲ, ಕ್ಷೇತ್ರದ ವಿಚಾರ ಇದೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಮತ್ತೆ ಮೇಲೆದ್ದ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ಮುಖ್ಯಮಂತ್ರಿ ಹೊಗಳಿ ಪತ್ರ ಬರೆದ ವೀರೇಂದ್ರ ಹೆಗ್ಗಡೆ
2012ರ ಅಕ್ಟೋಬರ್ 9ರಂದು ಧರ್ಮಸ್ಥಳದಲ್ಲಿ 17 ವರ್ಷದ ಬಾಲಕಿ ಸೌಜನ್ಯಳನ್ನು ಅಪಹರಿಸಿ, ಅತ್ಯಾಚಾರಗೈದು, ಕೊಲೆ ಮಾಡಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಅಮಾಯಕ ಸಂತೋಷ್ ರಾವ್‌ನನ್ನು ಬಂಧಿಸಿ, ತಾನೇ ಕೃತ್ಯ ಎಸಗಿದ್ದೇನೆಂದು ಒಪ್ಪಿಕೊಳ್ಳುವಂತೆ ದೌರ್ಜನ್ಯ ಎಸಗಿದ್ದರು. 2013ರಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಂತೋಷ್ ರಾವ್ ಸುತ್ತಲೇ ತನಿಖೆ ನಡೆಸಿದ ಸಿಬಿಐ, ಆತ ಕೃತ್ಯ ಎಸಗಿದ್ದಾನೆ ಎಂಬುದನ್ನು ಸಾಬೀತು ಮಾಡುವಲ್ಲಿ ವಿಫಲವಾಯಿತು. ಅಮಾಯಕ ಸಂತೋಷ್‌ನನ್ನು ನಿರ್ದೋಷಿಯೆಂದು ಸಿಬಿಐ ಕೋರ್ಟ್ ತೀರ್ಪು ನೀಡಿತು.