ರಾಜ್ಯದ ಕಾಂಗ್ರೆಸ್ ನೇತ್ರತ್ವದ ಸರ್ಕಾರವನ್ನು ರಾಜ್ಯಪಾಲರು ಅಸ್ಥಿರಗೊಳಿಸಿದ್ದಾರೆ ಎಂದು ಆರೋಪಿಸಿ ಭಾರತ್ ಕಮ್ಯುನಿಷ್ಟ ಪಕ್ಷ (ಸಿಪಿಐ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ರಾಜ್ಯಪಾಲರು ಕೇಂದ್ರ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ರಾಜ್ಯದ ಬಹುಮತ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ-ಜೆಡಿಎಸ್ ಪಕ್ಷಗಳು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯʼ ಎಂದು ಅಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಗರಣ ನಡೆದಿದೆ ಎನ್ನಲಾದ ಮುಡಾ ನಿವೇಶನ ಹಂಚಿಕೆ ಹಾಗೂ ವಾಲ್ಮಿಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಹಗರಣ ಸೇರಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ʼಈಗಾಗಲೇ ಕೆಲವು ರಾಜ್ಯಗಳ ಆಡಳಿತ ನಡೆಸುತ್ತಿರುವ ವಿರೋಧ ಪಕ್ಷಗಳ ಸರ್ಕಾರಗಳನ್ನು ರಾಜ್ಯಪಾಲರ ಮುಖಾಂತರ ಬುಡಮೇಲು ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಹೀಗಾಗಿ ರಾಜ್ಯಪಾಲರ ಹುದ್ದೆ ರದ್ದುಪಡಿಸುವುದು ಅವಶ್ಯಕವಾಗಿದೆʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ : ರಾಜ್ಯಪಾಲರ ವಾಪಸ್‌ಗೆ ಒತ್ತಾಯ
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಮುಖಂಡ ಬಾಬುರಾವ ಹೊನ್ನಾ, ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಅಲಿ ಅಹ್ಮದ್ ಖಾನ್, ಎಂ.ಡಿ.ಶಫಾಯತ್ ಅಲಿ, ಎಐಕೆಎಸ್ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಚೊಂಡಿ ಸೇರಿದಂತೆ ಪ್ರಮುಖರಾದ ಪ್ರಭು ಹೊಚಕನಳ್ಳಿ, ಶಿವರಾಜ ಕಮಠಾಣಾ, ಖಮರ್ ಪಟೇಲ್ , ಚಾಂದೋಬಾ ಭೋಸ್ಲೆ, ಪ್ರಭು ತಗಣಿಕರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.