ಔರಾದ ಹಾಗೂ ಕಮಲನಗರ ತಾಲೂಕಿನ ಬಗರ್ ಹುಕುಂ ಸಾಗುವಳಿದಾರರ ಭೂಮಿ ಸಕ್ರಮಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಕಿಸಾನ ಸಭಾ ಹಾಗೂ ಸಿಪಿಐ ಜಂಟಿಯಾಗಿ ಪ್ರತಿಭಟನೆ ನಡೆಸಿತು.
ಔರಾದ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಈಶ್ವರ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
“ಶೋಚಿತ ವರ್ಗಕ್ಕೆ ಮಾಜಿ ಸಿಎಂ ದೇವರಾಜ್ ಅರಸು ಅವರು ಉಳುವವನೇ ಭೂ ಒಡೆಯ ಎಂಬ ತತ್ವದಡಿಯಲ್ಲಿ ರಾಜ್ಯದ ಲಕ್ಷಾಂತರ ಜನರಿಗೆ ಭೂಮಿಯನ್ನು ನೀಡಿದರು. ಆದರೆ ನಂತರ ಬಂದ ಸರ್ಕಾರಗಳು ಈ ಪ್ರಗತಿಪರ ಕಾಯ್ದೆಗಳನ್ನು ಕಡೆಗಣಿಸುತ್ತ ಬಂಡವಾಳದಾರರ ಪರವಾದ ಕಾಯ್ದೆ ಮತ್ತು ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಜಿಲ್ಲಾ ಮುಖಂಡ ಬಾಬುರಾವ ಹೊನ್ನಾ ಮಾತನಾಡಿ, “ಕೇಂದ್ರ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಕೇಂದ್ರದ ಬಿಜೆಪಿ ಸರ್ಕಾರ ಅದಾನಿ, ಅಂಬಾನಿ ಕಂಪನಿಗಳಿಗೆ ಪ್ರೋತ್ಸಾಹ ನೀಡುತ್ತಾ ಅವರ ಪರವಾದ ಕಾಯ್ದೆಗಳು ಜಾರಿಗೊಳಿಸುತ್ತಿದೆ. ಅದಾನಿ ಅಕ್ರಮಗಳ ವಿರುದ್ದ ಲೋಕಸಭೆಯಲ್ಲಿ ಧ್ವನಿಯೆತ್ತಿದವರಿಗೆ ಸದಸ್ಯತ್ವ ರದ್ದುಗೊಳಿಸುವ ಮೂಲಕ ಮೋದಿ ನೇತ್ರತ್ವದ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ದೇಶದಲ್ಲಿ ಜಾತಿ, ಧರ್ಮದ ಮಧ್ಯೆ ಕೋಮು, ದ್ವೇಷ ಬಿತ್ತಿಯೇ ಕೇಂದ್ರ ಸರ್ಕಾರ ಜೀವಂತವಾಗಿದೆ” ಎಂದು ಕಿಡಿಕಾರಿದರು.
“ಔರಾದ ಹಾಗೂ ಕಮಲನಗರ ಮತಕ್ಷೇತ್ರದ ಶಾಸಕರು ಮನೆ ಮಂಜುರಾತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ತಾರತಮ್ಯ ನಡೆಸುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಶಾಸಕರು ಕ್ಷೇತ್ರದ ಎಲ್ಲಾ ಜನರನ್ನು ಹಸ್ತಕ್ಷೇಪ ಮಾಡದೆ ಸಮಾನವಾಗಿ ಕಾಣಬೇಕು” ಎಂದು ಒತ್ತಾಯಿಸಿದರು.
“1978 ರಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಬಗ್ಗೆ ಅರಣ್ಯ ಸಚಿವರ ಮತ್ತು ಕಂದಾಯ ಸಚಿವರ ಹೇಳಿಕೆಗಳು ಒಂದಕ್ಕೊಂದು ವಿರುದ್ಧವಾಗಿವೆ. ಅರಣ್ಯ ಸಚಿವರು 1978ರ ಮುಂಚೆ ಸಾಗುವಳಿ ಮಾಡುತ್ತಿರುವವರನ್ನು ಸಕ್ರಮಗೊಳಿಸಲಾಗುವುದೆಂದು ಹೇಳುತ್ತಾರೆ. ಆದರೆ ಕಂದಾಯ ಸಚಿವರು 15 ವರ್ಷಗಳಿಂದ ಸಾಗುವಳಿದಾರರನ್ನು ಸಕ್ರಮಗೊಳಿಸಲಾಗುವುದೆಂದು ಹೇಳಿಕೆ ನೀಡುತ್ತಾರೆ. ಇದನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದರು.
ಬೇಡಿಕೆಗಳು:
1. ಫಾರಂ ನಂ-50, 53 ಹಾಗೂ 57 ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿದಾರರನ್ನು ಕೂಡಲೇ ಸಕ್ರಮಗೊಳಿಸುವುದು ಮತ್ತು ಸಿ-ಫಾರಂ ಪಡೆದಿರುವ ಹೆಸರುಗಳು ಪಹಣಿಯಲ್ಲಿ ಸೇರಿಸಬೇಕು.
2. ಭೂ ನ್ಯಾಯ ಮಂಡಳಿ, ಭೂ ಅಕ್ರಮ-ಸಕ್ರಮ ಮಂಡಳಿಗಳನ್ನು ಕೂಡಲೇ ರಚಿಸಿ ಔರಾದ ತಾಲೂಕಿನ ಬಗರ್ ಹುಕುಂದಾರರಿಗೆ ಭೂಮಿ ನೀಡಬೇಕು.
3. ಔರಾದ ತಾಲೂಕಿನ ಸುಂದಾಳ, ಜಕನಾಳ್, ಇಟಗ್ಯಾಳ, ನಂದ್ಯಾಳ್, ಕರಂಜಿ ಮತ್ತು ಇತರೆ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯನ್ನು ಕಾಸ್ತು ಮಾಡುತ್ತಿದ್ದು, ಬಗರ್ ಹುಕುಂ ಸಾಗುವಳಿದಾರರಿಗೆ 4 ಎಕರೆ 38 ಗುಂಟೆ ಜಮೀನು ಮಂಜೂರು ಮಾಡಬೇಕು.
4. ತಡೆಹಿಡಿಯಲಾದ ವೃದ್ಯಾಪ ವೇತನವನ್ನು ಬಿಡುಗಡೆ ಮಾಡಬೇಕು.
5. ಔರಾದ ಮತಕ್ಷೇತ್ರದಲ್ಲಿ ಮನೆ ಮಂಜೂರಾತಿ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲು ವಿಧಾನ ಸಭಾ ಸದಸ್ಯರು ಮಾಡುತ್ತಿರುವ ತಾರತಮ್ಯವನ್ನು ನಿಲ್ಲಿಸಬೇಕು.
6. ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು.
7. ಯುವಕರಿಗೆ ನಿರುದ್ಯೋಗ ಭತ್ಯೆ ಒದಗಿಸಬೇಕು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಜಗಳದಲ್ಲಿ ಬಸವಳಿದ ಬಿಜೆಪಿ; ಕರ್ನಾಟಕಕ್ಕೆ ಬೇಕು ಸಮರ್ಥ ವಿರೋಧ ಪಕ್ಷ
ಪ್ರತಿಭಟನೆಯಲ್ಲಿ ಅಖಿಲ ಭಾರತ ಕಿಸಾನ ಸಭಾ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಅಲಿ ಅಹಮದ್ ಖಾನ್, ಸಹ ಕಾರ್ಯದರ್ಶಿ ಎಂ.ಡಿ.ಶಫಾಯತ್ ಅಲಿ, ಔರಾದ ತಾಲೂಕು ಕಾರ್ಯದರ್ಶಿ ಶೇಖ ನವಾಜ್, ಕಮಲನಗರ ತಾಲೂಕಾಧ್ಯಕ್ಷ ಚಂದೋಬಾ ಭೋಸ್ಲೆ, ಎಐಕೆಎಸ್ ಔರಾದ ಕಾರ್ಯದರ್ಶಿ ಮೊಗಲಪ್ಪ ಸುಂದಾಳ ಸೇರಿದಂತೆ ಪ್ರಮುಖರಾದ ತುಕರಾಮ ನಂದ್ಯಾಳ್, ಮಾದಪ್ಪ ಜಕನಾಳ ಸೇರಿದಂತೆ ಇತರರಿದ್ದರು.