ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಇರುವ ಅಂಡರ್ ಪಾಸ್ ಕೆಳಗೆ ದುಡಿದು ಬಂದು ಮಲಗಿರುವ ವಲಸೆ ಕಾರ್ಮಿಕರನ್ನು ನೆನ್ನೆ ರಾತ್ರಿ ತೆರವುಗೊಳಿಸಲು ಅವರ ಮೇಲೆ ದೌರ್ಜನ್ಯ ನಡೆಸಿರುವ ಕ್ರಮವನ್ನು ಕುಂದಾಪುರ ಸಿಐಟಿಯು ಸಂಚಲನ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಸಿಐಟಿಯು ಕುಂದಾಪುರ ಸಂಚಾಲಕರಾದ ಚಂದ್ರಶೇಖರ ವಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಗರದ ಕೆಲವು ಶ್ರೀಮಂತರ ಮರ್ಜಿಗೆ ಒಳಗಾಗಿ ಕೆಲವು ಅಧಿಕಾರಿಗಳು ಮತ್ತು ಇಲಾಖೆಗಳು ಮನೆ ಇಲ್ಲದ ವಲಸೆ ಕಾರ್ಮಿಕರು ಮಲಗಿರುವುದನ್ನು ಆಗಾಗ ಆಕ್ಷೇಪಿಸಿ ಹೊಡೆಯುವುದು ಬೆದರಿಸುವುದು ನಡೆಯುತ್ತಿರುವುದು ಸಹಿಸಲು ಸಾಧ್ಯವಿಲ್ಲ ವಲಸೆ ಕಾರ್ಮಿಕರು ನಮ್ಮ ಅತಿಥಿ ಕಾರ್ಮಿಕರಾಗಿದ್ದಾರೆ ಅವರ ದುಡಿಮೆಯಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗೆ ಸಹಾಯಕ ಆಗುತ್ತಿರುವುದು ಜಿಲ್ಲಾಡಳಿತ ಗಮನಿಸಬೇಕು. ತಮ್ಮ ಕುಟುಂಬಗಳ ನಿರ್ವಹಣೆಗಾಗಿ ವಲಸೆ ಬರುವ ಕಾರ್ಮಿಕರಿಗೆ ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಜವಾಬ್ದಾರಿ ಆಗಬೇಕೆ ಹೊರತು ವಲಸೆ ಕಾರ್ಮಿಕರನ್ನು ಮ್ರಗಗಳಂತೆ ನಡೆಸಿಕೊಳ್ಳುತ್ತಿರುವುದು ನಾಗರಿಕ ಸಮಾಜಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.