ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ಆರು ಸಾವಿರ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿರುವುದು ಹಾಗೂ ಪಡಿತರ ವಿತರಣೆ ಕೇಂದ್ರದಲ್ಲಿ ಪಡಿತರ ವಿತರಣೆಯಲ್ಲಿ ತೊಂದರೆಗಳಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಕುಂದಾಪುರ ತಾಲೂಕು ಸಮಿತಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಆಹಾರ ವಿಭಾಗದ ಉಪ ತಹಶೀಲ್ದಾರರು ಹಾಗೂ ನಿಯೋಜಿತ ಉಪ ತಹಶಿಲ್ದಾರರನ್ನು ಸಿಪಿಎಂ ನಿಯೋಗ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಚರ್ಚೆ ಮಾಡಿದ್ದು, ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
“ಈ ಬಗ್ಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು ಸುಮಾರು 6 ಸಾವಿರ ಬಿಪಿಎಲ್ ಪಡಿತರ ಚೀಟಿಗಳು ಪರಿಶೀಲನೆಯಲ್ಲಿದ್ದು, ಅದರಲ್ಲಿ ಅರ್ಹ ಫಲಾನುಭವಿಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್‌ನೊಂದಿಗೆ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ. ಅಲ್ಲದೆ ಕುಟುಂಬದ ವಿದ್ಯಾರ್ಥಿಗಳ ಆದಾಯವನ್ನು ಕುಟುಂಬದ ಆದಾಯವಾಗಿ ಪರಿಗಣಿಸುವುದಿಲ್ಲ. ಪಡಿತರ ವಿತರಣಾ ಕೇಂದ್ರದಲ್ಲಿ ಆಹಾರ ಇಲಾಖೆಯ ಹೊಸ ತಂತ್ರಾಂಶದ ತಾಂತ್ರಿಕ ತೊಂದರೆಗಳಿಂದ ಪಡಿತರ ವಿತರಣೆಯಲ್ಲಿ ವ್ಯತ್ಯಾಸ ಆಗಿರುವುದೇ ವಿನಃ ರೇಷನ್ ಕಾರ್ಡ್ ಪರಿಶೀಲನೆಗೂ ಸಂಬಂಧವಿಲ್ಲ. ಎಲ್ಲ ಅರ್ಹ ಪಡಿತರದಾರರಿಗೂ ಈ ತಿಂಗಳ ಅಂತ್ಯದವರೆಗೂ ಪಡಿತರ ವಿತರಿಸಲಾಗುತ್ತದೆ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ. ಅಧಿಕಾರಿಗಳು ಗ್ರಾಮ ಪಂಚಾಯಿತಿ ಹಾಗೂ ಪಡಿತರ ವಿತರಣಾ ಕೇಂದ್ರದಲ್ಲಿ ಪ್ರಕಟಣೆಯ ಫಲಕ ಅಳವಡಿಸಿ ಜನರಲ್ಲಿರುವ ಗೊಂದಲ ನಿವಾರಿಸಬೇಕು” ಎಂದು ಒತ್ತಾಯಿಸಿದರು.
“ಸರ್ಕಾರದ ಅವೈಜ್ಞಾನಿಕ ಮಾನದಂಡಗಳನ್ನು ಸರಿಪಡಿಸಲು ಆಹಾರ ಇಲಾಖೆ ಪ್ರತಿ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಅನರ್ಹರನ್ನು ಗುರುತಿಸಿ ಗ್ರಾಮ ಸಭೆಗಳಲ್ಲಿ ಮಂಡಿಸಿ ಅರಿವು ಮೂಡಿಸಿದ ಬಳಿಕ ಕ್ರಮ ಜರುಗಿಸಬೇಕು. ಅಲ್ಲಿವರೆಗೆ ಕಾರ್ಡ್ ರದ್ದು ಮಾಡಬಾರದು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕನ್ನಡರಾಜ್ಯೋತ್ಸವ 50ರ ಸಂಭ್ರಮ; ಸಾಂಸ್ಕೃತಿಕ ನೃತ್ಯ ತಂಡಗಳ ಸ್ಪರ್ಧೆಗೆ ಆಹ್ವಾನ
“ಕೆಲವು ಬಡವರು ಮನೆಕಟ್ಟಲು ಸಾಲದ ಸಂದರ್ಭದಲ್ಲಿ ಮಾಡಿದ ಸಾಲಕ್ಕೆ ಆದಾಯ ಹೆಚ್ಚು ತೋರಿಸಿದವರಿಗೂ ಸರ್ಕಾರ ರಿಯಾಯಿತಿ ನೀಡಿ ಅವರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ನಿಯೋಗ ಆಗ್ರಹಿಸಿತು.
ನಿಯೋಗದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕುಂದಾಪುರ ವಲಯ ಕಾರ್ಯದರ್ಶಿ ಎಚ್ ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಚಂದ್ರಶೇಖರ ವಿ, ಕಾಳಾವರ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ನಾವಡ, ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಪ್ರಶಾಂತ್ ಇದ್ದರು.
