2025-26ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿರುವ ಕ್ರೂರ ವಿಶ್ವಾಸ ದ್ರೋಹವಾಗಿದೆ ಎಂದು ಕೇಂದ್ರ ಬಜೆಟ್ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ ನಡೆಸಿತು.
ಆಳಂದ ಪಟ್ಟಣದಲ್ಲಿ ಸಿಪಿಐ(ಎಂ) ತಾಲೂಕು ಸಮಿತಿಯ ಪದಾಧಿಕಾರಿಗಳು ಕೇಂದ್ರ ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಸಿದರು. ಬಳಿಕ ಉಪತಹಶೀಲ್ದಾರ್ ಸಿದ್ರಾಮ್ ಎಸ್. ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಸಿಪಿಐ(ಎಂ) ಮುಖಂಡ ಸಲ್ಮಾನ್ ಖಾನ್ ಸಿ. ಮಾತನಾಡಿ, ʼಶ್ರೀಮಂತರಿಂದ ಶ್ರೀಮಂತರಿಗಾಗಿ ಮಾತ್ರ ಈ ಬಜೆಟ್ ಆಗಿದೆ. ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಇದು ಬಿಂಬಿಸುತ್ತದೆ. ಮೋದಿ ಸರ್ಕಾರದ ದಿವಾಳಿತನವನ್ನು ಬಿಂಬಿಸುವ ಈ ಬಜೆಟ್ ದೇಶದ ಅರ್ಥವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆʼ ಎಂದು ಟೀಕಿಸಿದರು.
ʼ2025-26ರಲ್ಲಿ ಹಂಚಿಕೆಗಳು ಎಸ್ಸಿ ಮತ್ತು ಎಸ್ಟಿಗಳಿಗೆ ಶೇ3.4 ಮತ್ತು ಶೇ2.6 ರಷ್ಟು ವೆಚ್ಚ ನೀಡಿದೆ. ಬಜೆಟ್ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಬಿಂಬಿಸುತ್ತದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಆಳಂದ ತಾಲೂಕಾಧ್ಯಕ್ಷ ರಮೇಶ ಲೋಹಾರ ಮಾತನಾಡಿ, ʼತೆರಿಗೆ ವಿನಾಯಿತಿ ಮಿತಿಯನ್ನು 12ಲಕ್ಷಕ್ಕೆ ಹೆಚ್ಚಿಸುವ ಮೂಲಕ ಮಧ್ಯಮ ವರ್ಗಗಳಿಗೆ ಸಹಾಯ ಮಾಡಲಾಗುತ್ತಿದೆ. ವಾಸ್ತವವಾಗಿ ಆದಾಯ ತೆರಿಗೆ ರಿಯಾಯಿತಿಗಳಿಂದಾಗಿ ಸರಕಾರ ಅನುಭವಿಸುವ ರೂಪಾಯಿ 1 ಲಕ್ಷ ಕೋಟಿ ನಷ್ಟದಿಂದ ಪ್ರಯೋಜನದ ಪಾಲು ಪಡೆಯುವವರು ಶೇ.1ರಷ್ಟು ಮಂದಿ ಮಾತ್ರ ಇದ್ದಾರೆʼ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಯೋಧ್ಯೆ ಅತ್ಯಾಚಾರ ಪ್ರಕರಣ; ಶೋಷಿತ ಸಮುದಾಯಕ್ಕೆ ಸಿಗದ ರಕ್ಷಣೆ
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಮೋದ ಪಾಂಚಾಳ, ರೂಪಾ ಇಕ್ಕಳಕಿ, ಸಮರ್ಥ್, ಶಿವಶಂರಣಪ್ಪ ಬೆಳಸುರೆ ಲ., ವಿಜಯ್, ಅಬ್ದುಲ್, ವಿಶಾಲ್, ಅಶಿಶ್ ಇತರರು ಹಾಜರಿದ್ದರು